ಚರ್ಮ

ಕಶೇರುಕಗಳಲ್ಲಿ ದೇಹದ ಹೊರಹೊದಿಕೆಯಾಗಿರುವ ಒಂದು ಅಂಗ (ಸ್ಕಿನ್). ಇದು ದೇಹದ ಒಳಭಾಗವನ್ನು ಹೊರಭಾಗದಿಂದ ಬೇರ್ಪಡಿಸುತ್ತದೆ. ದೇಹದ ನೀರುಲವಣಗಳು ಮತ್ತು ಇತರ ವಸ್ತುಗಳು ತಪ್ಪಿಸಿಕೊಂಡು ಹೊರಹೋಗದಂತೆಯೂ ಹೊರಗಿನಿಂದ ನೀರು ರಾಸಾಯನಿಕಗಳು ಒಳನುಗ್ಗದಂತೆಯೂ ತಡೆದು ದೇಹದ ಒಳಭಾಗಕ್ಕೆ ರಕ್ಷಣೆ ಒದಗಿಸಲು ಇದು ಸಹಾಯಕ. ಬೆಳಕಿನ ವಿಕಿರಣಗಳ ಪೈಕಿ α-ಕಿರಣಗಳನ್ನು ಒಳಹಾಯದಂತೆ ತಡೆಯುತ್ತದೆ. ಚರ್ಮ ಗಾಯಗೊಂಡ ಹೊರತು ರೋಗಾಣುಗಳು ಅದನ್ನು ಭೇದಿಸಿ ಒಳ ಹೊಗಲಾರವು. ಹೀಗೆ ಪ್ರತಿಕೂಲ ಪರಿಸರದ ವಿರುದ್ಧ ದೇಹಕ್ಕೆ ರಕ್ಷಣೆಯನ್ನು ಒದಗಿಸುವುದು ಚರ್ಮದ ಒಂದು ಪ್ರಧಾನಕ್ರಿಯೆ. ಪರವಸ್ತುಗಳೊಡನೆ ಘರ್ಷಿಸಿ ಆಗಬಹುದಾದ ಸಾಮಾನ್ಯ ಪೆಟ್ಟಿನಿಂದ ದೇಹದೊಳಗಿನ ಅಂಗಗಳು ಜರ್ಝರಿತವಾಗದಂತೆಯೂ ಚರ್ಮ ರಕ್ಷಿಸುತ್ತದೆ. ಪಂಜೇಂದ್ರಿಯಗಳ ಪೈಕಿ ಚರ್ಮ ಒಂದು. ಅದರಲ್ಲಿ ನೋವು, ಸ್ಪರ್ಶ, ಒತ್ತಡ, ಕಡಿತ, ಬಿಸಿ, ಶೈತ್ಯ-ಇವುಗಳ ಅರಿವನ್ನುಂಟುಮಾಡುವ ನರಗಳ ತುದಿಗಳು ಹೇರಳವಾಗಿದೆ. ಸಾಮಾನ್ಯವಾಗಿ ಭೂಚರಿಗಳೇ ಆಗಿರುವ ಸ್ತನಿಗಳಲ್ಲಿ ಚರ್ಮ ದೇಹೋಷ್ಣತೆಯ ನಿಯಂತ್ರಣದಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಸೂರ್ಯರಶ್ಮಿಯ ಅತಿನೇರಿಳೆ ಕಿರಣಗಳ ಸಹಾಯದಿಂದ ಚರ್ಮದಲ್ಲಿ ಜೀವಸತ್ತ್ವ ಡಿ ಉತ್ಪತ್ತಿ ಆಗಿ ದೇಹಕ್ಕೆ ಒದಗುತ್ತದೆ. ಜೀವಿಯ ಚರ್ಮದ ಜೀವಕೋಶ ಮತ್ತು ಊತಕಗಳು ಅದರ ಅನುಬಂಧಿತಗಳಾದ ಸ್ವೇದಗ್ರಂಥಿ. ರೋಮತುಪ್ಪಳಗಳು ಮತ್ತು ಸ್ನೇಹಗ್ರಂಥಿಗಳೂ ನಿರಂತರವಾಗಿ ನಾಶವಾಗುತ್ತಲೂ ಪುನರುತ್ಪತ್ತಿಯಾಗುತ್ತಲೂ ಇರುತ್ತವೆ.

ಹೆಚ್ಚಿನ ವಿವರಗಳನ್ನು ಈ ಮುಂದಿನ ಶೀರ್ಷಿಕೆಗಳ ಅಡಿಯಲ್ಲಿ ಅಳವಡಿಸಿದೆ:
1 ಮಾನವ ಚರ್ಮದ ರಚನೆ
2 ಚರ್ಮದ ಅನುಬಂಧಗಳು
3 ಜ್ಞಾನೇಂದ್ರಿಯವಾಗಿ ಚರ್ಮದ ಕ್ರಿಯೆ
4 ಸ್ತನಿಗಳ ದೇಹೋಷ್ಣತೆಯ ನಿಯಂತ್ರಣದಲ್ಲಿ ಚರ್ಮದ ಪಾತ್ರ 
5 ಚರ್ಮದ ಇತರ ಕ್ರಿಯೆಗಳು
6 ಚರ್ಮದ ರಸಾಯನವೃತ್ತಾಂತ

1 ಮಾನವ ಚರ್ಮದ ರಚನೆ : ಮಾನವರಲ್ಲಿ ಚರ್ಮ ಸುಮಾರು 2ಮಿ.ಮೀ ದಪ್ಪವಿರುವ ಹೊದಿಕೆ. ಕಣ್ಣುರೆಪ್ಪೆ ಶಿಶ್ನ ಮುಂತಾದ ಕಡೆಗಳಲ್ಲಿ ಇದು ಬಲು ತೆಳು. (1ಮಿ.ಮೀಗಿಂತ ಕಡಿಮೆ) ಮತ್ತು ಸೂಕ್ಷ್ಮವಾಗಿಯೂ ಅಂಗೈ ಅಂಗಾಲು ಬೆನ್ನು ಉದರಗಳಲ್ಲಿ ದಪ್ಪ (3ಮಿ.ಮೀ.ಗಿಂತ ಹೆಚ್ಚು) ಮತ್ತು ಒರಟಾಗಿಯೂ ಇದೆ. ಕೈಕಾಲುಗಳಲ್ಲಿ ಇದಕ್ಕೆ ವಿಶೇಷ ಪುಟಿತತೆ ಉಂಟು. ಅಲ್ಲಿ ಇದು ಮೃದು ಮತ್ತು ಬೇಕಾದ ರೀತಿ ಬಳುಕುವಂತಿರುವುದು. ಇದರ ಮೇಲೆ ವಿಶಿಷ್ಟವಾದ ಗೆರೆಗಳು ಇರುವುದು ಈ ಕಾರಣದಿಂದ. ಬೆರಳಿನಲ್ಲಿರುವ ಗೆರೆಗಳಿಗೆ ವೈಯಕ್ತಿಕ ವೈಶಿಷ್ಟ್ಯ ಇರುವುದರಿಂದ ಬೆರಳಚ್ಚಿನಿಂದ ವ್ಯಕ್ತಿಯ ಗುರುತು ಹಚ್ಚಲು ಇವು ಬಹುಮುಖ್ಯ ಸಾಧನಗಳು. ಚರ್ಮದಲ್ಲಿ ಎಲ್ಲ ಕಡೆಯೂ ಬೆವರು ಗ್ರಂಥಿಗಳ (ಸ್ವೇದಗ್ರಂಥಿ) ದ್ವಾರಗಳಾದ ಅತಿ ಸಣ್ಣರಂಧ್ರಗಳು ಕಂಡುಬರುತ್ತವೆ.

ಮಾನವಚರ್ಮದಲ್ಲಿ ಹೊರತ್ವಚ (ಎಪಿಡರ್ಮಿಸ್), ನಿಜತ್ವಚ (ಡರ್ಮಿಸ್) ಮತ್ತು ತ್ವಚದ ಅಡಿ ಊತಕ (ಸಬ್‍ಕ್ಯುಟೇನಿಯಸ್ ಟಿಶ್ಯೂ) ಎಂಬ ಮೂರು ಭಾಗಗಳನ್ನು ಗುರುತಿಸಬಹುದು.

ಹೊರತ್ವಚ : ಇದು ನಿಜತ್ವಚದ ಹೊರಕವಚ. ನಿಜತ್ವಚದ ಮೇಲಿರುವ ಉಬ್ಬು ತಗ್ಗುಗಳಿಂದ ಕೂಡಿದ ತಳಹದಿ ಪದರದ (ಬೇಸ್‍ಮೆಂಟ್ ಮೆಂಬ್ರೇನ್) ಮೇಲೆ ಅಳವಡಿಸಲ್ಪಟ್ಟ ಜೀವಕೋಶಗಳು ಏಳೆಂಟು ವರಸೆಗಳಿಂದ ಹೊರತ್ವಚ ರಚಿತವಾಗಿದೆ. ಹೀಗಾಗಿ ಹೊರತ್ವಚ ಅನೇಕ ಕಡೆ ಬೆರಳಿನಾಕಾರದ ಬೇರುಗಳಂತೆ ನಿಜತ್ವಚದ ಒಳಹೊಕ್ಕಿರುವಂತೆಯೂ ಇನ್ನು ಕೆಲವು ಕಡೆ ನಿಜತ್ವಚ ಹೊರತ್ವಚದೊಳಕ್ಕೆ ಬೆರಳಿನ ಆಕಾರದಲ್ಲಿ ಚಾಚಿಕೊಂಡಿರುವಂತೆಯೂ ಕಾಣುವುದು. ತಳಹದಿಪದರ ನಿಜತ್ವಚಕ್ಕೆ ಹೊರತ್ವಚವನ್ನು ನಿಕಟವಾಗಿ ಅಂಟಿಸಿರುತ್ತದೆ. ಚರ್ಮದ ಸಕಲಕಾರ್ಯಗಳಲ್ಲಿ ಭಾಗವಹಿಸುವ ಬಿಡಿಭಾಗಗಳ ಹಾಗೂ ವಸ್ತುಗಳ ಅವಿಚ್ಛಿನ್ನ ಉತ್ಪಾದನೆ ಹೊರತ್ವಚದ ಕೆಲಸ. ಇದರ ಅತ್ಯಂತ ಕೆಳವರಸೆಯ ಜೀವಕೋಶಗಳ ನಿರಂತರ ವಿಭಜನೆಯಿಂದ ಈ ಉತ್ಪಾದನೆ ಆಗುತ್ತದೆ. ಭ್ರೂಣದ ಬೆಳೆವಣಿಗೆಯ ಕಾಲದಲ್ಲಿ ಈ ಕೋಶಗಳು ಅದರ ಹೊರಪದರದಿಂದ (ಎಕ್ಟೋಡರ್ಮ್) ಲಭಿಸುತ್ತವೆ. ವಿಭಜನೆಯಿಂದ ಉತ್ಪನ್ನವಾದ ಜೀವಕೋಶಗಳು ತಮ್ಮ ಮೇಲಿನ ಜೀವಕೋಶಗಳನ್ನು ಹೊರಕ್ಕೆ ತಳ್ಳುತ್ತವೆ. ಆದ್ದರಿಂದ ಹೊರತ್ವಚದ ಮೇಲುವರಸೆಗಳು ಹಳೆಯ ಜೀವಕೋಶಗಳಿಂದಾದವು; ಮತ್ತು ಅತ್ಯಂತ ಮೇಲು ವರಸೆಗಳು ಅತ್ಯಂತ ಹಳೆಯ ಜೀವಕೋಶಗಳ ಪ್ರತೀಕವಾದ ನಿರ್ಜೀವ ಹಾಗೂ ಗಡಸುಪದರ ಎಂದು ವ್ಯಕ್ತವಾಗುತ್ತದೆ. ಮೇಲೆ ಹೋದಂತೆಲ್ಲ ಜೀವಕೋಶಗಳಲ್ಲಿ ಕೆಲವು ವ್ಯತ್ಯಾಸಗಳು ಗಮನಾರ್ಹ. ಹೊರತ್ವಚದಲ್ಲಿ ಇವನ್ನು ತೋರುವ ನಾಲ್ಕು ವರಸೆಗಳನ್ನು ನೋಡಬಹುದು. ಅಡಿಕೋಶಗಳ ಮೇಲಿನ ನಾಲ್ಕಾರು ಕೋಶ ದಪ್ಪದ ವರಸೆ ಮುಳ್ಳು ಜೀವಕೋಶಗಳ (ಪ್ರಿಕಲ್ ಸೆಲ್ಸ್) ವರಸೆ. ಈ ಕೋಶಗಳು ಒಂದಕ್ಕೊಂದು ಮುಳ್ಳುಗಳಿಂದ ಅಂಟಿಸಲ್ಪಟ್ಟಿರುವಂತೆ ಸೂಕ್ಷ್ಮದರ್ಶಕದಲ್ಲಿ ಕಂಡುಬರುವುದರಿಂದ ಇವಕ್ಕೆ ಆ ಹೆಸರುಂಟು. ಅಕ್ಕಪಕ್ಕದ ಜೀವಕೋಶಗಳ ಭಿತ್ತಿಯ ಮೇಲೆ ಗಂಟುಗಳಿರುವುದೂ ಇವು ಒಂದಕ್ಕೊಂದು ತಾಕಿ ಮುಳ್ಳಿನಂತೆ ಇರುವುದೂ ವ್ಯಕ್ತವಾಗುತ್ತದೆ; ಕೋಶದೊಳಗೆ ಗಂಟಿನಿಂದ ಗಂಟಿಗೆ ತಂತುಗಳು ಹರಿಯುತ್ತವೆ. ಮುಳ್ಳು ಕೋಶಗಳ ಮೇಲಿರುವುದು 2-3 ಕೋಶ ದಪ್ಪವಾದ ಅಲ್ಪಸ್ವಲ್ಪ ಏರುತಗ್ಗುಗಳಿರುವ ಕಣಕೋಶಗಳ (ಗ್ರಾನ್ಯುಲರ್ ಸೆಲ್ಸ್) ವರಸೆ. ಕೋಶಗಳು ಸ್ವಲ್ಪ ಚಪ್ಪಟೆಯಾಗಿ ಇಲೇಯ್ಡಿನ್ ಎಂಬ ವಸ್ತುವಿನ ಸಣ್ಣಸಣ್ಣ ಕಣಗಳಿಂದ ತುಂಬಿವೆ. ಹಳೆಯದಾದಂತೆ ಇಲೇಯ್ಡಿನ್ ಕಿರಾಟೋಹೈಯಲಿನ್ ಆಗಿ ಕೊನೆಗೆ ಕಿರಾಟಿನ್ ಆಗಿ ಪರಿವರ್ತಿತವಾಗುತ್ತದೆ. ಈ ಘಟ್ಟಗಳೇ ಇನ್ನೂ ಹೊರಗಿನ ಎರಡು ವರಸೆಗಳಿಗೆ ಕಾರಣ. ಕಣಕೋಶಗಳ ಹೊರಗೆ ತಿಳಿಪದರ (ಸ್ಟೇಟಮ್‍ಲ್ಯುಸಿಡಮ್) ಇದೆ. ಜೀವ ಕೋಶಗಳು ತಮ್ಮ ಜೈವಿಕಕ್ರಿಯೆಗಳನ್ನು ಕಳದುಕೊಂಡು ಅವುಗಳ ರಚನೆ ಹಾಗೂ ಕೇಂದ್ರಬಿಂದು ಅಸ್ಪಷ್ಟವಾಗುವುದರಿಂದ ಇವು ತಿಳಿಪದರವಾಗುತ್ತವೆ. ಇನ್ನೂ ಹಳೆಯವಾಗಿ ಇನ್ನಷ್ಟು ಹೊರಕ್ಕೆ ತಳ್ಳಲ್ಪಟ್ಟಾಗ ಕೋಶಗಳ ಜೀವ ಪೂರ್ಣ ನಾಶವಾಗಿ ಅವು ಕಿರಾಟಿನ್ ಅಡಕವಾಗಿರುವ ಗಡಸುತಟ್ಟೆಗಳಾಗಿ ಮ್ಯೂಕೊಪಾಲಿಸ್ಯಾಕರೈಡುಗಳಿಂದ ಒಂದಕ್ಕೊಂದು ಗಾರೆಹಾಕಿದಂತೆ ಅಂಟಿಕೊಂಡು ಒಂದರಮೇಲೊಂದು ಪೇರಿಸಲ್ಪಟ್ಟ ಪದರಗಳಾಗಿ ನಿರಂತರವಾಗಿ ಸುಲಿದೂ ಹೋಗುತ್ತಿರುತ್ತವೆ. ಕೆರೆದರೆ ಬರುವ ಹುರುಪೆ ಇದೇ. ಅಡಿಕೋಶದ ವಿಭಜನೆಯಿಂದ ಬಂದ ಹೊಸ ಕೋಶ ಹೊರಕ್ಕೆ ನೂಕಲ್ಪಡುತ್ತ ಸುಲಿದುಹೋಗುವುದಕ್ಕೆ ಸುಮಾರು ಒಂದು ತಿಂಗಳಾಗುತ್ತದೆ. ಸೋರಿಯಾಸಿಸ್ ಮುಂತಾದ ಕೆಲವು ಚರ್ಮರೋಗಗಳಲ್ಲಿ ಈ ಕಾಲ ಬಲು ಕಡಿಮೆ ಆಗಿ ತೀವ್ರವಿಭಜನೆಯಿಂದ ಕೋಶಗಳು ಶೀಘ್ರವಾಗಿ ಹೊರದಬ್ಬಲ್ಪಟ್ಟು ಕೇಂದ್ರಬಿಂದುವಿರುವ ಕೋಶಗಳೇ ಸುಲಿದು ಹೋಗುವುವು. ಮಾರಕ ಪೆಂಫಿಗಸ್ ರೋಗದಲ್ಲಿ ಮುಳ್ಳುಕೋಶಗಳ ಕೂಡಿಕೆ ಕಡಿದುಹೋಗಿ ಕೋಶಕೋಶಗಳ ಸೇರ್ಪಡೆ ಇಲ್ಲದೆ ಬೊಬ್ಬೆಗಳೇಳುತ್ತವೆ.

ಚರ್ಮದ ನಿರಂತರ ಸುಲಿಯುವಿಕೆ ರೋಗಾಣುಗಳಿಗೆ ಚರ್ಮದ ಮೇಲೆ ನೆಲೆ ಸಿಕ್ಕದಂತೆ ಮಾಡುತ್ತದೆ. ಅಲ್ಲದೆ ಈ ಹೊದಿಕೆಯ ಕೇವಲ ನಿರ್ಜಲ ಸ್ವಭಾವ ಮತ್ತು ಇನ್ನೂ ಕೆಲವು ಅವ್ಯಕ್ತ ಕಾರಣಗಳು ಕೆಲವು ರೋಗಾಣುಗಳಿಗೆ ನಿರೋಧಕವಾಗಿವೆ. ಹೀಗೆ ಇದು ನಿರ್ಜೀವ ಪೊರೆಯಾಗಿದ್ದರೂ ದೇಹಕ್ಕೆ ಅವಶ್ಯ ರಕ್ಷಣೆಯನ್ನು ನೀಡುವ ಹೊದಿಕೆಯಾಗಿರುತ್ತದೆ. ಚರ್ಮ ದಪ್ಪವಾಗಿರುವ ಅಂಗೈ ಅಂಗಾಲುಗಳಲ್ಲಿ ಹೊರತ್ವಚದ ಎಲ್ಲ ಪದರಗಳೂ ಹೆಚ್ಚು ದಪ್ಪವಾಗಿದ್ದರೂ (ಸುಮಾರು 1-11/2ಮಿ.ಮೀ.) ತಿಳಿಪದರ ಮತ್ತು ನಿರ್ಜೀವ ಹೊರಪದರ ಬಹು ದಪ್ಪವಾಗಿವೆ. ತುಟಿ, ಕಣ್ಣುರೆಪ್ಪೆ ಮುಂತಾದ ಕಡೆ ಇರುವ ಅತಿತೆಳುವಾದ ಹೊರತ್ವಚದಲ್ಲಿ (ಸುಮಾರು 0.1ಮಿ.ಮೀ.) ತಿಳಿಪದರ ಪೂರ್ಣವಾಗಿ ಲೋಪವಾಗಿರಬಹುದು ; ನಿರ್ಜೀವ ಪದರ ಬಹು ತೆಳು.
ಹೊರತ್ವಚದ ಕೋಶಗಳಲ್ಲಿರುವ ಹಳದಿಮಿಶ್ರಿತ ಕೆಂಜರುಬಣ್ಣದ ಮೆಲನಿನ್ ಎಂಬ ವಸ್ತು ಚರ್ಮದ ಬಣ್ಣಕ್ಕೆ ಕಾರಣ. ಇದು ಅತಿ ಹೆಚ್ಚಾಗಿದ್ದರೆ ನೀಗ್ರೋಗಳಂತೆ ಕಪ್ಪುಬಣ್ಣವೂ ಅತಿ ಕಡಿಮೆಯಾಗಿದ್ದರೆ ಪಾಶ್ಚಾತ್ಯರಂತೆ ತಿಳಿವರ್ಣವೂ ಉಂಟಾಗುತ್ತವೆ. ಅಡಿಕೋಶಗಳ ನಡುವೆ ಅಲ್ಲಲ್ಲಿ ಇರುವ ಮೆಲನೊಸೈಟುಗಳೆಂಬ ಜೀವಕೋಶಗಳಿಂದ ಮೆಲನಿನ್ ಉತ್ಪತ್ತಿಯಾಗುತ್ತದೆ. ಈ ಜೀವಕೋಶಗಳು ಭ್ರೂಣದಲ್ಲಿ ನರದ ಉಬ್ಬೇಣಿನಿಂದ ಬೆಳೆದು ಭ್ರೂಣದ ಹೊರಪದರದ (ಎಕ್ಟೋಡರ್ಮ್) ಕೆಳಭಾಗಕ್ಕೆ ದಾರಿಮಾಡಿಕೊಂಡು ಹೊರತ್ವಚದ ಅಡಿಕೋಶಗಳ ಮಧ್ಯೆ ಬೆಣೆಗಳಂತೆ ತೂರಿಕೊಳ್ಳುವುವಲ್ಲದೆ ಸುತ್ತಲೂ ಇರುವ ಅಡಿಕೋಶ ಮುಳ್ಳುಕೋಶಗಳ ನಡುವೆ ಅನೇಕ ಚಾಚುಗಳನ್ನು ಕೂಡ ಹೊಂದಿರುತ್ತವೆ. ಒಂದು ಚದರ ಮಿಲಿಮೀಟರಿನಲ್ಲಿ 1000-3000 ಮೆಲನೊಸೈಟುಗಳಿರುತ್ತವೆಂದು ಅಂದಾಜು. ಮೆಲನೊಸೈಟುಗಳಂತೆಯೇ ಕಾಣುವ ಲ್ಯಾಂಗರ್‍ಹ್ಯಾನ್ಸಿನ ಜೀವಕೋಶಗಳೂ ಅಲ್ಲಲ್ಲಿ ಇರುತ್ತವೆ. ಆದರೆ ಇವು ಮೆಲನಿನ್ನನ್ನು ಉತ್ಪತ್ತಿಮಾಡುವುದಿಲ್ಲ. ಡೋಪ ಎಂಬ ವಸ್ತುವಿನಿಂದ ವರ್ಣೀಕರಿಸಿದರೆ ಮೆಲನೊಸೈಟುಗಳು ಮಾತ್ರ ವರ್ಣವನ್ನು ತೆಗೆದುಕೊಳ್ಳುತ್ತವೆ. ಲ್ಯಾಂಗರ್‍ಹ್ಯಾನ್ಸಿನ ಜೀವಕೋಶಗಳಿಗೂ ಮೆಲನೊಸೈಟುಗಳಿಗೂ ಏನಾದರೂ ಸಂಬಂಧವಿದೆಯೇ ಎನ್ನುವುದು ತಿಳಿಯದು. ಮೆಲನೊಸೈಟುಗಳಲ್ಲಿರುವ ಟೈರೊಸಿನೇಸ್ ಎಂಬ ಎಂಜೈಮ್, ಟೈರೊಸಿನ್ ಎಂಬ ಅಮೈನೋ ಆಮ್ಲದ ಮೇಲೆ ಪ್ರಭಾವಕಾರಿಯಾದ್ದರಿಂದ ಆ ಕೋಶಗಳಲ್ಲಿ ಮೆಲನಿನ್ ಉತ್ಪತ್ತಿ ಆಗುತ್ತದೆ; ಹಾಗೂ ಅವುಗಳ ಚಾಚುಗಳ ಮೂಲಕ ಮುಳ್ಳುಕೋಶಗಳ ನಡುವೆಯೂ ಮುಳ್ಳು ಕೋಶಗಳೊಳಗೂ ಮೆಲನಿನ್ ಕಣಗಳು ಶೇಖರವಾಗುತ್ತವೆ. ಕೋಶಗಳೊಳಗಿರುವ ಮೆಲನಿನ್ ಕಣಗಳು ಕೇಂದ್ರಬಿಂದುವಿನ ಸುತ್ತ ಕುಲಾವಿಯ ಆಕಾರದಲ್ಲಿ ನೆಲೆಸಿ ಸೂರ್ಯರಶ್ಮಿಯಲ್ಲಿನ ಅತಿನೇರಿಳೆ ಕಿರಣಗಳಿಂದ ಕೇಂದ್ರಬಿಂದುವನ್ನು ರಕ್ಷಿಸುತ್ತವೆ. ಹುಟ್ಟು ಬಿಳುಪು ಚರ್ಮವಿರುವ ಆಲ್ಬಿನೊಗಳೆಂಬ ಬಿಳಿಚುತನದ ರೋಗಿಗಳಲ್ಲಿ ಕ್ರೋಮೊಸೋಮುಗಳ ದೋಷದಿಂದ ಟೈರೊಸಿನೇಸ್ ಎಂeóÉೈಮ್ ಲೋಪವಾಗಿರುವುದರಿಂದ ಮೆಲನೊಸೈಟುಗಳಲ್ಲಿ ಮೆಲನಿನ್ ತಯಾರಾಗುವುದಿಲ್ಲ.

ನಿಜತ್ವಚ : ಹೊರತ್ವಚದ ಒಳಭಾಗದಲ್ಲಿದೆ. ಅದಕ್ಕಿಂತಲೂ ಮಂದವಾಗಿದೆ. ಮತ್ತು ಕ್ರಮೇಣ ಇನ್ನೂ ಒಳಗಿರುವ ತ್ವಚದ ಅಡಿ ಊತಕದೊಂದಿಗೆ ಮಿಲನವಾಗಿಹೋಗುತ್ತದೆ. ನಿಜತ್ವಚ ಬಂಧಿಸುವ ಊತಕದಿಂದಾಗಿದೆ ಮತ್ತು ಈ ಊತಕದ ನೆರವಿನಲ್ಲಿ ರಕ್ತನಾಳಗಳು, ದುಗ್ಧರಸನಾಳಗಳು ಮತ್ತು ನರಗಳು ಪಸರಿಸಿಕೊಳ್ಳಲೂ ಅಲ್ಪಸಂಖ್ಯಾತವಾದ ವಿಶಿಷ್ಟರೀತಿಯ ಜೀವಕೋಶಗಳು ಅಡಕವಾಗಿರಲೂ ಅನುವಾಗಿದೆ. ಮೇಲೆ ಹೇಳಿರುವಂತೆ ಹೊರತ್ವಚದೊಳಗೆ ಹೊಕ್ಕಿರುವ ಬೆರಳಿನಾಕಾರದ ನಿಜತ್ವಚದ ಚಾಚುಗಳಲ್ಲಿ ನಾಳಗಳ ಹಾಗೂ ನರಗಳ ಆದಿ ಅಂತ್ಯಗಳನ್ನು ನೋಡಬಹುದು. ಇಂಥ ಚಾಚುಗಳು 1ಮಿ.ಮೀ.  ಚದರದಲ್ಲಿ 40-140ರಷ್ಟಿರುತ್ತವೆ.

ಬಂಧಿಸುವ ಊತಕದಲ್ಲಿ ಮೂರು ರೀತಿಯ ಎಳೆಗಳು ಘನವೂ ಅಲ್ಲದ ದ್ರವವೂ ಅಲ್ಲದ ಒಂದು ವಿಶೇಷ ಮಾಧ್ಯಮದಲ್ಲಿ ಹೆಣೆದುಕೊಂಡಿರುತ್ತವೆ. ಹೆಚ್ಚು ಸಂಖ್ಯೆಯಲ್ಲಿರುವ ಎಳೆಗಳು ಕೊಲ್ಲಾಜೆನ್ ಎಂಬ ನಾರಿನಂತಿರುವ ಪ್ರೋಟೀನಿನಿಂದ ಆದವು. ಇವು ಬೆಳ್ಳಗಿದ್ದು ತಂತುಗಟ್ಟು, ಸ್ನಾಯುಹುರಿಗಳಲ್ಲಿ (ಲಿಗಮೆಂಟ್ ಮತ್ತು ಟೆಂಡನ್) ಅವುಗಳ ಒಣತೂಕದ 75ರಷ್ಟು ಕೊಲ್ಲಾಜೆನ್ನಿನಿಂದ ಆಗಿರುತ್ತವೆ. ಕೊಲ್ಲಾಜೆನ್ನಿನಲ್ಲಿ ಗ್ಲೈಸಿನ್, ಪ್ರೋಲಿನ್ ಮತ್ತು ಹೈಡ್ರಾಕ್ಸಿಪ್ರೋಲಿನುಗಳೆಂಬ ಅಮೈನೋ ಆಮ್ಲಗಳಿರುತ್ತವೆ. ಎಲೆಕ್ಟ್ರಾನ್ ಸೂಕ್ಷ್ಮದರ್ಶಕದಲ್ಲಿ ನೋಡಿದಾಗ ಇದರ ಅಣುಗಳು ಅತಿಲಂಬವಾಗಿಯೂ ಬಳ್ಳಿಯಂತೆ ಸುತ್ತಿಕೊಂಡೂ ನಿರ್ದಿಷ್ಟ ಸ್ಥಳಗಳಲ್ಲಿ ಅಡ್ಡಗೆರೆಗಳನ್ನುಳ್ಳದ್ದಾಗಿಯೂ ಕಂಡುಬರುತ್ತವೆ. ಕೊಲ್ಲಾಜೆನ್ನಿನಿಂದಾದ ಈ ಬಿಳಿಹುರಿಗಳು ಎಳೆದರೆ ಉದ್ದವಾಗಲಾರವು. ಇವು ಅಗಾಧ ಎಳೆತವನ್ನು ತಡೆಯುವಷ್ಟು ಸಾಮಥ್ರ್ಯಯುತವಾಗಿರುತ್ತವೆ. ಇಲಾಸ್ಟಿನ್ ಎಂಬ ಇನ್ನೊಂದು ರೀತಿಯ ಪ್ರೋಟೀನಿನಿಂದಾದ ಹಳದಿ ಎಳೆಗಳು ಹುರಿಮಾಡಲ್ಪಡದೆ ಎಳೆ ಎಳೆಯಾಗಿ ಇರುತ್ತವೆ. ಇಲಾಸ್ಟಿನ್ ಮಾಸಲು ಹಳದಿ ಬಣ್ಣವಾಗಿರುವುದರಿಂದ ಈ ಎಳೆಗಳಿಗೆ ಹಳದಿ ಎಳೆಗಳು ಎಂದೂ ಪುಟಿತತೆ ಇದ್ದು ಎಳೆದರೆ ಉದ್ದವಾಗಿ, ಬಿಟ್ಟರೆ ಪುನಃ ಮೊದಲಿನಂತಾಗುವಂತಿರುವುದರಿಂದ ಪುಟಿತ (ಇಲಾಸ್ಟಿಕ್) ಎಳೆಗಳೆಂದೂ ಹೆಸರುಂಟು. ಡೆಸ್ಮೋಸೀನ್ ಎಂಬ ಅಮೈನೋ ಆಮ್ಲ ಎಳೆಗಳ ಪುಟಿತತೆಗೆ ಕಾರಣ. ಮೂರನೆಯ ರೀತಿಯ ಎಳೆ ರೆಟಿಕ್ಯುಲಿನ್ ಎಂಬ ಪ್ರೋಟೀನಿನಿಂದಾದುದು. ಈ ಎಳೆಗಳು ಅತ್ಯಂತ ಸೂಕ್ಷ್ಮವಾಗಿದ್ದು ಇವುಗಳ ನಿಕಟ ಹೆಣಿಗೆಯಿಂದ ಬಲೆಯ ಕಣ್ಣುಗಳಂತಾಗುವುದರಿಂದ ಇವುಗಳಿಗೆ ರೆಟಿಕ್ಯುಲರ್ ಎಳೆಗಳು ಅಂದರೆ ಜಾಲಂಧ್ರ ಎಳೆಗಳು ಎಂದು ಹೆಸರಾಗಿದೆ. ಇವಕ್ಕೆ ಬೆಳ್ಳಿಯ ಲವಣಗಳನ್ನು ಕೂಡುವ ಗುಣವಿರುವುದರಿಂದ ಆ ಲವಣಗಳನ್ನು ಉಪಯೋಗಿಸಿ ಬಣ್ಣಕೊಟ್ಟು ಇವನ್ನು ಸೂಕ್ಷ್ಮದರ್ಶಕದಲ್ಲಿ ನೋಡಬಹುದು. ಮಾಧ್ಯಮವಸ್ತು [ಇದಕ್ಕೆ ಅಡಿಪಾಯದ ವಸ್ತು (ಗ್ರೌಂಡ್ ಸಬ್‍ಸ್ಟೆನ್ಸ್) ಎಂದೂ ಹೆಸರುಂಟು] ಮ್ಯೂಕೋಪಾಲಿಸ್ಯಾಕರೈಡುಗಳೆಂಬ ಜಾತಿಯ ರಾಸಾಯನಿಕಗಳಿಂದ ಆಗಿದೆ. ಇವುಗಳಲ್ಲಿ ಹಯಲ್ಯೂರೋನಿಕ್ ಆಮ್ಲ ಮತ್ತು ಡರ್ಮಟಿನ್ ಸಲ್ಫೇಟ್ ಎಂಬ ಎರಡು ರಾಸಾಯನಿಕಗಳು ಮುಖ್ಯ. ಚರ್ಮದೊಳಗೆ ಅಕಸ್ಮಾತ್ ಸೇರಿದ ಹೊರದ್ರವವಸ್ತು ಅಥವಾ ಅಣುಗಳು ಹರಡಿಕೊಳ್ಳದಂತೆ ಅದೇ ಸ್ಥಳಕ್ಕೆ ಸೀಮಿತಗೊಳಿಸುವುದು ಹಯಲ್ಯೂರೋನಿಕ್ ಆಮ್ಲದ ಕ್ರಿಯೆ.
ರಕ್ತನಾಳಗಳು : ನಿಜತ್ವಚದಲ್ಲಿ ಬಹುರಕ್ತನಾಳಗಳಿವೆ. ಅಗತ್ಯಬಿದ್ದಾಗ ಅವುಗಳಲ್ಲಿರುವ ರಕ್ತ ದೇಹದ ಇತರ ಕಡೆಗಳಿಗೆ ಒದಗುವಂತಿದೆ. ಅಲ್ಲದೆ ಈ ರಕ್ತನಾಳಗಳು ದೇಹೋಷ್ಣತೆಯನ್ನು ನಿಯಂತ್ರಿಸುವುದರಲ್ಲಿ ಮುಖ್ಯಪಾತ್ರ ವಹಿಸುತ್ತವೆ. ಧಮನಿಗಳು ಮೂರು ಮಟ್ಟಗಳಲ್ಲಿ ಹೆಣಿಲುಗಳು. ಎಲ್ಲಕ್ಕಿಂತ ಆಳವಾದದ್ದು ತ್ವಚದ ತಳ ಊತಕದಲ್ಲಿಯೂ ಮಧ್ಯದ ಹೆಣಿಲು ತಳಊತಕ ಮತ್ತು ನಿಜತ್ವಚಗಳು ಸೇರುವೆಡೆಯಲ್ಲಿಯೂ ಎಲ್ಲಕ್ಕಿಂತ ಮೇಲಿನದು ನಿಜತ್ವಚದ ಬೆರಳಿನಂತಿರುವ ಚಾಚುಗಳಲ್ಲಿಯೂ ಉಂಟು. ಧಮನಿಗಳಿಂದ ಭಿತ್ತಿಯಲ್ಲಿ ಅಧಿಕವಾಗಿ ಸ್ನಾಯುತಂತುಗಳನ್ನು ಹೊಂದಿರುವ ಕಿರುಧಮನಿಗಳೂ ಅವುಗಳಿಂದ ತೆಳುಭಿತ್ತಿಯ ಲೋಮನಾಳಗಳೂ ಕವಲುಗಳಾಗುತ್ತವೆ. ಲೋಮನಾಳಗಳ ಭಿತ್ತಿ ನೀರಿನಲ್ಲಿ ವಿಲೀನವಾಗುವ ಕಲಾಯ್ಡ್ ಅಲ್ಲದ ವಸ್ತುಗಳು ಒಳಗೂ ಹೊರಗೂ ತೂರಿಹೋಗುವಷ್ಟು ಜಾಳಾಗಿರುತ್ತದೆ. ಕಾಲು ಮತ್ತು ಕೈಗಳಲ್ಲಿ ಲೋಮನಾಳಗಳಿಗೂ ಸ್ವಾಭಾವಿಕವಾದ ಸಂಕುಂಚನ ಸಾಮಥ್ರ್ಯ, ಅವುಗಳಲ್ಲಿ ಸ್ನಾಯುಗಳಿಲ್ಲದಿದ್ದರೂ, ಇರುವುದು ಚೆನ್ನಾಗಿ ವ್ಯಕ್ತವಾಗುತ್ತದೆ. ಅಲ್ಲದೆ ಅನುವೇದನನರಗಳು (ಸಿಂಪಥೆಟಿಕ್ ನರಗಳು) ಕಿರು ಧಮನಿಗಳಿಗೆ ಪೂರೈಕೆ ಆಗುವುದರಿಂದ ಅವು ಅತಿಯಾಗಿಯೋ ಅಲ್ಪವಾಗಿಯೋ ಕುಗ್ಗುವಂತಿರುತ್ತವೆ. ಚಲಿಸುತ್ತಿರುವ ರಕ್ತದಲ್ಲಿರುವ ಅಥವಾ ಸ್ಥಳದಲ್ಲಿ ತಯಾರಾದ ರಾಸಾಯನಿಕ ವಸ್ತುಗಳು ರಕ್ತನಾಳಗಳನ್ನು ಹಿಗ್ಗಿಸಬಲ್ಲುವು ಅಥವಾ ಕುಗ್ಗಿಸಬಲ್ಲುವು. ಅಡ್ರಿನಲಿನ್ ಮತ್ತು ಪಿಟ್ರೆಸಿನುಗಳು ಕಿರುಧಮನಿಗಳನ್ನು ಕುಗ್ಗಿಸುತ್ತವೆ. ಹಿಸ್ಟಮಿನ್, ಕೈನಿನ್ ಮತ್ತು ಅಸಿಟೈಲ್ ಕೋಲಿನುಗಳು ಕಿರುಧಮನಿಗಳನ್ನು ಹಿಗ್ಗಿಸುತ್ತವೆ. ಶೈತ್ಯ ಕುಗ್ಗಿಸುತ್ತದೆ. ಸಾಧಾರಣ ಪೆಟ್ಟು ಚರ್ಮದಲ್ಲಿ ದ್ರವ ತುಂಬಿದ ಹೊಪ್ಪಳೆಯನ್ನು ಏಳಿಸುತ್ತದೆ. ಇದು ಮೂರು ಮಟ್ಟಗಳಲ್ಲಿ ಕಂಡುಬರುವ ಪ್ರತಿಕ್ರಿಯೆ ಎಂದು ಮೊತ್ತಮೊದಲಿಗೆ ತೋರಿಸಿದಾತ ಲೆವಿಸ್. ಇದರಿಂದ ಈ ಪ್ರತಿಕ್ರಿಯೆಗೆ ಲೆವಿಸನ ತ್ರಿವಳಿಪ್ರತಿಕ್ರಿಯೆ (ಟ್ರಿಪಲ್ ರೆಸ್ಪಾನ್ಸ್ ಆಫ್ ಲೆವಿಸ್) ಎಂದು ಹೆಸರಿದೆ. ಮೊದಲು ಪೆಟ್ಟು ತಾಕಿದೆಡೆಯಲ್ಲಿ ಲೋಮನಾಳಗಳು ಹಿಗ್ಗಿ ಪೆಟ್ಟಿನ ಆಕಾರದ ಕೆಂಪುಗೀರು ಕಾಣುತ್ತದೆ. ಒಂದೆರಡು ಮಿನಿಟುಗಳಲ್ಲಿ ಸುತ್ತಣ ಚರ್ಮದಲ್ಲಿ ನರಗಳ ಪ್ರತಿಕ್ರಿಯೆಯ ಮೂಲಕ ಆ ಸ್ಥಳದ ಧಮನಿ ಹಿಗ್ಗುವುದರಿಂದ ಸುತ್ತಲೂ ಕೆಂಪಾದ ಬಾಸುಂಡೆ ಏಳುತ್ತದೆ. ಈ ಪ್ರತಿಕ್ರಿಯೆಗೆ ಸ್ಥಳೀಯ ನರಗಳ ಅಖಂಡತೆ ಇರಬೇಕು. ಸುಮಾರು ಹತ್ತು ಮಿನಿಟುಗಳ ಬಳಿಕ ಮೂರನೆಯ ಪ್ರತಿಕ್ರಿಯೆ-ಕೆಂಪುಗೆರೆ ಕಂಡ ಎಡೆಯಲ್ಲಿ ಹಿಸ್ಟಮಿನ್ ಬಿಡುಗಡೆಯಿಂದ ಹಿಗ್ಗಿದ ಲೋಮನಾಳಗಳ ಮೂಲಕ ದ್ರವಸ್ರಾವ-ಆಗಿ ಅಲ್ಲಿ ಚರ್ಮದಲ್ಲಿ ನೀರುತುಂಬಿದ ದದ್ದು ಏಳುವುದು.

ಅಪಧಮನಿಗಳಿಂದ ಅಭಿಧಮನಿಗಳಿಗೆ ರಕ್ತ ಲೋಮನಾಳಗಳ ಮೂಲಕವೇ ಅಲ್ಲದೆ ನೇರವಾಗಿ ಅಪಧಮನಿ ಆಬಿಧಮನಿಗಳನ್ನು ಜಂಟಿಸುವ ನಾಳಗಳ ಮೂಲಕವೂ ಕೆಲವು ಕಡೆ ಹರಿಯುತ್ತದೆ. ಈ ನಾಳಗಳ ಸಾಮಥ್ರ್ಯವಂತ ಸ್ನಾಯು ಸಡಿಲಗೊಂಡಾಗ ರಕ್ತ ಅಪಧಮನಿಯಿಂದ ನೇರವಾಗಿ ಅಭಿಧಮನಿಗೆ ಹರಿಯುವುದರಿಂದ ಉಷ್ಣತೆಯನ್ನು ಕಾಪಾಡಬಹುದು. ನಿಜತ್ವಚದ ಚಾಚುಗಳಲ್ಲಿಯೂ ಬಂಧಿಸುವ ಊತಕದಲ್ಲಿಯೂ ದುಗ್ಧರಸದ ಸೂಕ್ಷ್ಮನಾಳಗಳು ಪ್ರಾರಂಭವಾಗಿ ಅನಂತರ ರಕ್ತನಾಳಗಳ ಜೊತೆಯಲ್ಲೆ ಕ್ರಮಿಸುತ್ತವೆ.
ನರಗಳು : ಬಿಳಿ ಮತ್ತು ಬೂದುಬಣ್ಣದ ಎರಡು ಬಗೆಯ ನರಗಳೂ ಚರ್ಮದಲ್ಲಿವೆ. ರಕ್ತನಾಳಗಳಿಗೆ ಮತ್ತು ಬೆವರುಗ್ರಂಥಿಗಳಿಗೆ ಬೂದುಬಣ್ಣದ ಕ್ರಿಯಾವಾಹಿ ನರಗಳು ಪೂರೈಕೆ ಆಗುತ್ತವೆ. ಮಿಕ್ಕೆಲ್ಲವೂ ಬಿಳಿಯ ಜ್ಞಾನವಾಹಿ ನರಗಳೇ. ಇವು ಹೊರತ್ವಚದ ಕೆಳಗೆ ಹೆಣಿಲಾಗಿವೆ. ಹೆಣಿಲಿನಿಂದ ಹೊರತ್ಚಚಕ್ಕೂ ನಿಜತ್ವಚಕ್ಕೂ ನರಪೂರೈಕೆಯಾಗುತ್ತದೆ. ಅವುಗಳ ಕೊನೆಗಳು-ವಾಸ್ತವವಾಗಿ ಇವು ಜ್ಞಾನವಾಹಿ ನರಗಳಾದ್ದರಿಂದ ಇವನ್ನು ಪ್ರಾರಂಭವೆಂದು ಹೇಳಬೇಕು-ಬಿಳಿ ಹೊದಿಕೆಯನ್ನು ಕಳೆದುಕೊಂಡು ಬೂದುಬಣ್ಣದವಾಗಿರುತ್ತವೆ. ಈ ಕೊನೆಗಳಲ್ಲಿ ಕೆಲವು ತಟ್ಟೆಗಳ ಆಕಾರವಾಗಿ ಹೊರತ್ವಚದ ಜೀವಕೋಶಗಳ ನಡುವೆಯೂ ನಿಜತ್ವಚದಲ್ಲಿಯೂ ಇವೆ. ಇವಕ್ಕೆ ಮೆಕ್ಕೆಲನ ತಟ್ಟೆಗಳು ಎಂದು ಹೆಸರು. ಇನ್ನು ಕೆಲವು ಮೀಸ್ನರನ ಕಣಗಳು ಎನ್ನಿಸಿಕೊಂಡು ನಿಜತ್ವಚದ ಚಾಚುಗಳಲ್ಲಿ ಇವೆ. ಕೈಬೆರಳುಗಳಲ್ಲಿ ಇವು ವಿಶೇಷವಾಗಿವೆ. ಇವೆರಡೂ ಸ್ಪರ್ಶಜ್ಞಾನಕ್ಕೆ ಕಾರಣವೆಂದು ನಂಬಲಾಗಿದೆ. ಕೆಲವು ನರತಂತುಗಳು ಕೋಶಗಳ ನಡುವೆ ಹಾಗೂ ಬಂಧಿಸುವ ಊತಕದಲ್ಲಿ ನಗ್ನವಾಗಿವೆ. ಇವು ನೋವಿನ ಅರಿವನ್ನು ಉಂಟುಮಾಡುವುವೆಂದು ನಂಬಲಾಗಿದೆ. ಮಿಕ್ಕ ನರತಂತುಗಳು ಪೆಸಿನಿಕಣಗಳು, ಕೌಸನ ಕೊನೆಬುಡ್ಡೆಗಳು, ರೂಫಿನಿಯ ನರಾಂತ್ಯಾಂಗಗಳು ಎಂಬ ವಿಶಿಷ್ಟ ರಚನೆಗೊಂಡ ಕೊನೆಗಳು. ಇವು ಅನುಕ್ರಮವಾಗಿ ಒತ್ತಡ, ಶೈತ್ಯ, ಉಷ್ಣಗಳ ಅರಿವನ್ನು ಉಂಟುಮಾಡುವುವೆಂಬ ನಂಬಿಕೆ. ಉಷ್ಣ ಶೈತ್ಯ, ನೋವು ಸ್ವರ್ಶಗಳ ಅರಿವೇ ಅಲ್ಲದೆ ತುರಿಕೆ ಅಥವಾ ಕಡತ, ತಿನಿಸು ಇದೂ ಒಂದು ಸ್ಪಷ್ಟ ಅರಿವು ಎನ್ನುವುದಕ್ಕೆ ತಕ್ಕಷ್ಟು ಕಾರಣ ಉಂಟು. ಟ್ರಿಪ್ಸಿನ್, ಪ್ಯಾಂಕ್ರಿಯಾಟಿನ್ ಮುಂತಾದ ಎಂಡೋಪೆಪ್ಟಿಡೇಸ್ ಎಂಬ ಗುಂಪಿಗೆ ಸೇರಿದ ಎಂeóÉೈಮುಗಳು ಹೊರತ್ವಚವನ್ನು ಸೇರಿದರೆ ತುರಿಕೆ ಉಂಟಾಗುವುದು. ನಸುಗುನ್ನಿಗಿಡದಲ್ಲಿರುವ ಮ್ಯುಕಾನಿನ್ ಎಂಬ ವಸ್ತುವೂ ಕಡಿತವನ್ನು ಉಂಟುಮಾಡುತ್ತದೆ. ಶಿಲೀಂಧ್ರಗಳ ಎಂಜೈಮುಗಳು ಹುಳುಕಡ್ಡಿ, ಇಸಬು ಇತ್ಯಾದಿ ಚರ್ಮರೋಗಗಳ ತುರಿಕೆಗೆ ಕಾರಣ. ಹಿಸ್ಟಮಿನ್, ಅಸಿಟೈಲ್ ಕೋಲಿನ್ ಇವುಗಳೂ ತುರಿಕೆಯನ್ನು ಉಂಟುಮಾಡುತ್ತವೆ. ಆದರೆ ಇವು ದದ್ದನ್ನೂ ಉಂಟುಮಾಡುವುವು. ತುರಿಕೆಗೂ ದದ್ದಿಗೂ ಇರಬಹುದಾದ ಸಂಬಂಧ ತಿಳಿದಿಲ್ಲ. 

ಜೀವಕೋಶಗಳು : ನಿಜತ್ವಚದಲ್ಲಿ ಅನೇಕ ಬಗೆಯ ಜೀವಕೋಶಗಳು ವಿರಳವಾಗಿ ಇವೆ. ಇವುಗಳಲ್ಲಿ ಬಹುಪಾಲು ತಂತುಜನಕ ಕೋಶಗಳು. ಇವುಗಳಿಗೆ ಬಿಳಿಯ ಅಥವಾ ಕೊಲ್ಲಾಜೆನ್ ಎಳೆಗಳೊಡನೆ ನಿಕಟಸಂಬಂಧ ಉಂಟು. ಬಹುಶಃ ತಂತುಗಳಿಗೆ ಬೇಕಾದ ವಿಶಿಷ್ಟ ಪ್ರೋಟೀನುಗಳೂ ಮಾಧ್ಯಮ ವಸ್ತುವೂ ಇವುಗಳ ಚಟುವಟಿಕೆಯಿಂದಲೇ ಒದಗುತ್ತವೆಂದು ಕಾಣಿಸುತ್ತದೆ. ಮಾಸ್ಟ್ ಕೋಶಗಳಲ್ಲಿ ರವೆಯಂತೆ ಕಣಗಳಿವೆ. ಇವು ಹೊರಬಂದಾಗ ಹಿಸ್ಟಮಿನ್ ಮತ್ತು ಹೆಪಾರಿನ್ ಆಗುತ್ತವೆ. ರಕ್ತಕಣಗಳಾದ ಮಾನೋಸೈಟ್, ಲಿಂಫೋಸೈಟ್ ಮತ್ತು ಪಾಲಿಮಾರ್ಫುಗಳೂ ನಿಜತ್ವಚದ ಮಧ್ಯವಸ್ತುವಿನಲ್ಲಿ ಅಡಗಿರುತ್ತವೆ. ಇವಲ್ಲದೆ ಹಿಸ್ಟಿಯೋಸೈಟ್ ಮತ್ತು ಪ್ಲಾಸ್ಮಾಕೋಶಗಳೆಂಬವೂ ಇವೆ. ಈ ಕೋಶಗಳು ವಿಷಾಣುಗಳ ಸೋಂಕಿನ ವಿರುದ್ಧ ಹಾಗೂ ರೋಗನಿಗ್ರಹ ಕಾರ್ಯದಲ್ಲಿ ತೊಡಗಿರುವುವು.

ಸ್ವೇದಗ್ರಂಥಿಗಳು (ಬೆವರುಗ್ರಂಥಿಗಳು) : ಈ ಗ್ರಂಥಿಗಳಲ್ಲಿ ಸ್ರವಿಸುವ ಭಾಗ ಮತ್ತು ವಾಹಕಭಾಗ (ನಾಳ)ಇವೆ. ಸ್ರವಿಸುವ ಭಾಗ ಒಂದೇ ವರಸೆಯ ಲಂಬಕೋಶ (ಕಾಲಮ್ನಾರ್ ಸೆಲ್ಸ್) ಸುರುಳಿ ಸುತ್ತಿದ ಕೊಳವೆ. ಇದರ ಸುತ್ತ ಅನೈಚ್ಛಿಕಸ್ನಾಯುಗಳೂ ಅವುಗಳ ಸುತ್ತ ತೆಳುವಾದ ತಂತುಗಳೂ ಬುಟ್ಟಿಯಂತೆ ಆವರಿಸಿವೆ. ಇದಕ್ಕೆ ಧಾರಾಳ ರಕ್ತಪೋಷಣೆ ಉಂಟು. ಸ್ವೇದಗ್ರಂಥಿಯ ನಾಳ ಇಷ್ಟೇ ಗಾತ್ರದ ಕೊಳವೆ ಆದರೂ ಎರಡು ಮೂರು ಕೋಶಗಳ ವರಸೆಯಿಂದಾದ ಭಿತ್ತಿಯುಳ್ಳದ್ದಾಗಿರುವುದರಿಂದ ಇದರ ರಂಧ್ರ ಬಹು ಕಿರಿದು. ಈ ನಾಳ ನಿಡುಸುರುಳಿಯಾಗಿ ಹೊರತ್ವಚದೆಡೆ ನೇರ ಸಾಗಿ ಅದರ ಚಾಚುವಿನ ತುದಿಯಲ್ಲಿ ಕೊನೆಗೊಳ್ಳುವುದು. ಅಲ್ಲಿಂದ ಮೇಲೆ ಹೊರತ್ವಚದ ಕೋಶಗಳ ನಡುವೆ ಹಾಯುವ ಸ್ಕ್ರೂ ಆಕಾರದ ಸಂಧಾಗಿ ಚರ್ಮದ ಮೇಲ್ಮೈಯಲ್ಲಿ ಒಂದು ರಂಧ್ರವಾಗಿ ಕೊನೆಗೊಳ್ಳುತ್ತದೆ. ಗ್ರಂಥಿಯೂ ಅದರ ನಾಳವೂ ಹೊರತ್ವಚದಿಂದ ಇಳಿಬಿದ್ದ ಬೆಳೆತಗಳು. ಗೋಚರ ಮತ್ತು ಅಗೋಚರವಾಗಿ ದಿವಸದ 24 ಗಂಟೆಗಳಲ್ಲಿ ಸುಮಾರು 600ಮಿ.ಲೀ. ನೀರು ಚರ್ಮದ ಮೂಲಕ ವಿಸರ್ಜಿತವಾಗುತ್ತದೆ. ಇದರಲ್ಲಿ 80% ಅಗೋಚರವಾಗಿ ಸ್ವೇದಗ್ರಂಥಿಯ ರಂಧ್ರಗಳ ಹಾಗೂ ಹೊರತ್ವಚದ ಮೂಲಕ ಆವಿಯಾಗಿ ಕಳೆಯುವ ನೀರು. ಇದು ಸ್ವೇದಗ್ರಂಥಿಗಳಿಂದ ಉತ್ಪತ್ತಿಯಾಗುವ ಸ್ರಾವವಲ್ಲ. ಇದರ ಪ್ರಮಾಣ ಬೇರೆ ಬೇರೆ ವ್ಯಕ್ತಿಗಳಲ್ಲಿ ಬೇರೆ ಬೇರೆ ಕಾಲಗಳಲ್ಲಿ ಹೆಚ್ಚು ವ್ಯತ್ಯಾಸವನ್ನು ತೋರಿಸುವುದಿಲ್ಲ. ಸ್ವೇದ ಗ್ರಂಥಿಗಳ ಚಟುವಟಿಕೆಯಿಂದ ಉತ್ಪತ್ತಿಯಾಗಿ ಮೈಮೇಲೆ ಕಾಣಿಸಿಕೊಳ್ಳುವ ದ್ರವ ಬೆವರು. ಇದು ಮೇಲ್ಮೈಯಿಂದ ಬಾಷ್ಪೀಭವಿಸಿ ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಗೋಚರ ಬೆವರಿನ ಪರಿಮಾಣ ಸ್ವೇದ ಗ್ರಂಥಿಗಳಿಗೆ ಪೂರೈಕೆ ಆಗುವ ಅನುವೇದನೆ ನರಗಳ ಪ್ರೇರಣೆಯಿಂದ ನಿಯಂತ್ರಿಸಲ್ಪಡುತ್ತದೆ. ದೇಹದ ಉಷ್ಣತೆ ಹೆಚ್ಚಾದ ಸಂದರ್ಭಗಳಲ್ಲಿ ಅದನ್ನು ಸಹಜಸ್ಥಿತಿಗೆ ಇಳಿಸಲು ಇಂಥ ನರಪ್ರೇರಣೆಯಿಂದ ಉಂಟಾದ ಬೆವರು ಆವಿಯಾಗಿ ಹೋಗುವುದರಿಂದ ಸಾಧ್ಯವಾಗುತ್ತದೆ. ಸ್ವೇದ ಗ್ರಂಥಿಯ ನರಗಳು ಅನುವೇದನ ನರಗಳಾದರೂ ಅವುಗಳ ರಾಸಾಯನಿಕ ನಡುವರ್ತಿ ಅಸಿಟೈಲ್ ಕೋಲಿನ್. ಬೆವರು ಬಣ್ಣವಿಲ್ಲದ ಒಂದು ದ್ರವ. ಅದರಲ್ಲಿ ಭಾಗ 99% ನೀರು. ಅಲ್ಪಸ್ವಲ್ಪ ಉಪ್ಪು, ಅಮೋನಿಯ, ಯೂರಿಯ, ಯೂರಿಕ್ ಆಮ್ಲ, ಕೊಬ್ಬುಗಳೂ ಇದರಲ್ಲಿ ಇವೆ. ಗುದ, ಹೊರ ಪ್ರಜನನಾಂಗಗಳ ದ್ವಾರ, ಕಂಕುಳು, ಸ್ತನಾಗ್ರ ಇವುಗಳ ಸುತ್ತ ವಿಶೇಷ ತೆರನಾದ ಸ್ವೇದ ಗ್ರಂಥಿಗಳಿವೆ. ಇವಕ್ಕೆ ಅಪೋಕ್ರೈನ್ ಗ್ರಂಥಿಗಳೆಂದು ಹೆಸರು. ಕೋಶಗಳ ಭಾಗಗಳೇ ಕಳಚಿ ದ್ರವವಾಗಿ ಸ್ರವಿಸಲ್ಪಡುವುದು ಇವುಗಳ ವಿಶೇಷ. ಈ ಗ್ರಂಥಿಗಳು ಸಾಮಾನ್ಯ ಸ್ವೇದ ಗ್ರಂಥಿಗಳಿಗಿಂತ ದೊಡ್ಡವು. ಬಿಳಿಯ ಜನರಿಗಿಂತ ಕಪ್ಪು ಜನರಲ್ಲಿ ಇವುಗಳ ಸಂಖ್ಯೆ ಹೆಚ್ಚು. ಅಲ್ಲದೆ ಹೆಂಗಸರಲ್ಲಿ ಗಂಡಸರಿಗಿಂತ ಹೆಚ್ಚಾಗಿದ್ದು ಅಧಿಕವಾಗಿ ಸ್ರವಿಸುತ್ತವೆ. ಗರ್ಭಿಣಿಯರಲ್ಲಿ ಮತ್ತು ಬಹಿಷ್ಠೆಯಾಗಿರುವವರಲ್ಲಿ ಸ್ರಾವ ಇನ್ನೂ ಅಧಿಕ. ಇವುಗಳ ಸ್ರಾವ ಅತಿ ನೀರಾಗಿರುವ ಹಾಲಿನಂತೆ. ಈ ವ್ಯಕ್ತಿಯಲ್ಲಿ ಸ್ವಾಭಾವಿಕವಾಗಿರುವ ಏಕಾಣುಗಳಿಂದ ಮಾರ್ಪಟ್ಟು ಒಂದೊಂದು ವ್ಯಕ್ತಿಯಲ್ಲೂ ಬಹುಶಃ ಒಂದೊಂದು ಜನಾಂಗದಲ್ಲೂ ವಿಶಿಷ್ಟವಾದ ಶಾರೀರಿಕಗಂಧ ಇದಾಗುತ್ತದೆ. ಮಾನವರಲ್ಲಿ ಮತ್ತು ಇತರ ಕೆಲವು ಪ್ರಾಣಿಗಳಲ್ಲಿ ಈ ಗಂಧದಲ್ಲಿ ಲೈಂಗಿಕ ಪ್ರಚೋದಕ ಪ್ರಭಾವವಿರುವುದೂ ಲೈಂಗಿಕ ಕಾರ್ಯಾಚರಣೆಯ ಉನ್ನತಿಯಲ್ಲಿ ಈ ಗ್ರಂಥಿಗಳ ಸ್ರಾವವಾಗುವುದೂ ತಿಳಿದುಬಂದಿದೆ. ಆದರೆ ಇವುಗಳ ಕಾರ್ಯಕಾರಣಸಂಬಂಧ ನಿಷ್ಕøಷ್ಟವಾಗಿ ತಿಳಿದಿಲ್ಲ. ಸ್ತನಗಳು ವಿಶೇಷ ರೀತಿಯ ಅಪೋಕ್ರೈನ್ ಗ್ರಂಥಿಗಳು. 

ನಿಜತ್ವಚದ ಅಡಿ ಊತಕ : ಇದು ಚರ್ಮಕ್ಕೂ ಅದರ ಕೆಳಗಡೆ ಇರುವ ಕೊಬ್ಬಿಗೂ ನಡುವೆ ಇರುವ ವಲಯ. ನಿಜತ್ವಚದ ಬಂಧಿಸುವ ಊತಕ ಇನ್ನೊಂದು ರೀತಿಯ ಕೊಬ್ಬುಶೇಖರಣೆ ಆಗಬಲ್ಲ ಊತಕವಾಗಿ ಕ್ರಮೇಣ ಪರಿವರ್ತನೆ ಆಗುವುದು ಈ ವಲಯದಲ್ಲಿ ಕಾಣಬರುತ್ತದೆ. ಆದ್ದರಿಂದ ನಾರೆಳೆಕೋಶಗಳೂ ಕೊಬ್ಬಿನ ಕೋಶಗಳೂ ಕಂಡುಬರುತ್ತವೆ. ದೊಡ್ಡವಾಗಿರುವ ಸ್ವೇದ ಗ್ರಂಥಿಗಳ ಸ್ರಾವಕಭಾಗವೂ ಕೆಲವು ರೋಮಕೂಪಗಳೂ ಅಡಿಊತಕದಲ್ಲಿವೆ.

ಚರ್ಮದಲ್ಲಿನ ವ್ಯತ್ಯಾಸಗಳು : ಸ್ತನಿಗಳ ಚರ್ಮದಲ್ಲಿರುವ ಕೆಲವು ವಿಶೇಷಗಳು ಮಾನವರಲ್ಲಿಲ್ಲ. ಅನೇಕ ಚತುಷ್ಪಾದಿಗಳಲ್ಲಿ ಚರ್ಮದ ಅಡಿ-ಮುಖ್ಯವಾಗಿ ಮುಂಡಭಾಗದಲ್ಲಿ-ಒಂದು ತೆಳುವಾದ ಅನೈಚ್ಛಿಕಸ್ನಾಯು ವ್ಯಾಪಕವಾಗಿ ಉಂಟು. ಇದರಿಂದ ಚರ್ಮವನ್ನು ಸ್ಥಳೀಯವಾಗಿ ನಡುಗಿಸಬಲ್ಲ ಸೌಕರ್ಯವಿರುತ್ತದೆ. ಕೀಟಗಳ ಉಪದ್ರವವನ್ನು ನಿವಾರಿಸಲು ಅನುಕೂಲವಾಗುವ ಈ ರಚನೆ ಮಾನವನಲ್ಲಿ ಅನಾವಶ್ಯಕವಾದ್ದರಿಂದ ವಿಕಾಸದ ಯಾವುದೋ ಹಂತದಲ್ಲಿ ಅಳಿದುಹೋಗಿ ಕುತ್ತಿಗೆಯಲ್ಲಿ ಮಾತ್ರ ಇರುವ ಒಂದು ಅವಶೇಷವಾಗಿದೆ. ಮಿಕ್ಕ ಸ್ತನಿಗಳಲ್ಲಿ ಮೈಮೇಲೆಲ್ಲ ರೋಮಗಳಿದ್ದು ದೇಹೋಷ್ಣತೆಯನ್ನು ಕಾಪಾಡಲೂ ಮಳೆಯಲ್ಲಿ ತೋಯ್ದಾಗ ಮೈಮೇಲೆ ಬಿದ್ದ ನೀರು ಸುಲಭವಾಗಿ ಹರಿದುಹೋಗುವಂತೆ ಮಾಡಲೂ ಇರುವ ಅನುಕೂಲತೆ ಮಾನವನಲ್ಲಿ ಉಡುವ ಬಟ್ಟೆ ವಗೈರೆಗಳಿಂದ ಅನಾವಶಕ್ಯಕವಾಗಿ ಮೈ ಕೂದಲು ಮಿತವಾಗಿದೆ. ಸದಾ ನೀರಿನಲ್ಲಿರುವ ತಿಮಿಂಗಲ ಇತ್ಯಾದಿ ಸ್ತನಿಗಳಲ್ಲೂ ಇದೇ ರೀತಿ ಕೂದಲು ಮಿತಿಗೊಂಡಿರುವುದನ್ನು ನೋಡಬಹುದು. ಆನೆ, ಘೇಂಡಾಮೃಗ, ಕಾಡುಹಂದಿ ಮುಂತಾದವುಗಳಲ್ಲಿ ಚರ್ಮ ಬಹು ಮಂದವಾಗಿಯೂ ಒರಟಾಗಿಯೂ ಇದ್ದು ಈ ಪ್ರಾಣಿಗಳು ಕಾಡಿನ ಮುಳ್ಳುಪೊದೆಗಳ ನಡುವೆ ನೋವಿನಿಂದ ಬಾಧಿತವಾಗದಂತೆ ಓಡಾಡಬಹುದಾಗಿದೆ. ಆರ್ಮಡಿಲ್ಲೊದಲ್ಲಿ (ಚಿಪ್ಪು ಹಂದಿ) ಚರ್ಮದ ಹೊರಗೆ ಮೂಳೆಗಳಿಂದಾದ ಕವಚ ಉಂಟು.
ಪಕ್ಷಿಗಳಲ್ಲಿ ಚರ್ಮ ಶುಷ್ಕ ಮತ್ತು ತೆಳುವಾಗಿ ಉಂಟು. ಸ್ತನಿಗಳಲ್ಲಿ ವಿಶಿಷ್ಟ ಲಕ್ಷಣವಾಗಿ ಮೈಮೇಲೆ ಎಲ್ಲಿಯೋ ಒಂದು ಚೂರು ಭಾಗದಲ್ಲಿಯಾದರೂ ಕೂದಲು ಇರುವಂತೆ ಪಕ್ಷಿಗಳಲ್ಲಿ ರೆಕ್ಕೆಪುಕ್ಕಗಳು ಇದ್ದೇ ಇರುತ್ತವೆ. ಸರೀಸೃಪಗಳು ಮತ್ತು ಅವುಗಳಿಗಿಂತ ವಿಕಾಸದಲ್ಲಿ ಕೆಳಮಟ್ಟದ ಕಶೇರುಕಗಳು ಎಲ್ಲವೂ ಒಂದೇ ಮಟ್ಟದ ದೇಹೋಷ್ಣತೆ ಉಳ್ಳವಲ್ಲ. ಅವುಗಳ ದೋಹೋಷ್ಣತೆ ಬಾಹ್ಯಾವರಣದ ಉಷ್ಣತೆಯನ್ನು ಅನುಸರಿಸುವುದರಿಂದ ದೇಹೋಷ್ಣತೆಯ ನಿಯಂತ್ರಣಕ್ಕಾಗಿ ಮಾನವರ ಚರ್ಮದಲ್ಲಿ ಇರುವಂತೆ ರಚನೆ ಇವುಗಳಲ್ಲಿ ಕಂಡುಬರುವುದಿಲ್ಲ. ಸರೀಸೃಪಗಳಲ್ಲಿ ಚರ್ಮ ಶುಷ್ಕವಾಗಿರುತ್ತದೆ. ಹೊರತ್ವಚ ಕೊಂಬಿನಂಥ ವಸ್ತುವಿನಿಂದ ಕೂಡಿದ್ದು ಗಡುಸಾಗಿಯೂ ದಪ್ಪವಾಗಿಯೂ ಇರಬಹುದು. ಆಗಿಂದಾಗ ಇದು ಪೊರೆ ಬಿಟ್ಟಂತೆ ವಿಸರ್ಜನೆ ಆಗುವುದೂ ಉಂಟು. ಅಪರೂಪಕ್ಕೆ ನಿಜತ್ವಚದಲ್ಲಿ ಅಲ್ಲಲ್ಲಿ ತಟ್ಟೆಯಾದ ಮೂಳೆಯ ಚೂರುಗಳೂ ಕಂಡುಬರಬಹುದು. ಚರ್ಮದಲ್ಲಿ ಮೆಲನಿನ್ ಅಲ್ಲದೆ ಕೆಂಪು, ಹಸಿರು, ಹಳದಿ, ನೀಲಿ ಇತ್ಯಾದಿ ವಸ್ತುಗಳೂ ವಿಶೇಷ ಬೀಜಕಣಗಳಲ್ಲಿ ಉತ್ಪತ್ತಿ ಆಗಿ ಚರ್ಮದಲ್ಲಿ ವಿಶಿಷ್ಟ ವರ್ಣವಿನ್ಯಾಸ ಕಂಡುಬರಬಹುದು. ಗೋಸುಂಬೆಯಲ್ಲಿ (ಕ್ಯಾಮೆಲಿಯಾನ್) ಇರುವಂತೆ ರಕ್ಷಣಾಕಾರಣಕ್ಕಾಗಿ ವರ್ಣ ಬದಲಾಗುವಂತೆಯೂ ಇರಬಹುದು.

ದ್ವಿಚರಿಗಳಲ್ಲಿ ಚರ್ಮ ತೆಳುವಾಗಿಯೂ ಒದ್ದೆಯಾಗಿಯೂ ಇರುವುದು. ಇದರಿಂದ ಚರ್ಮದ ಮೂಲಕ ವಾಯು ಹೊರಗೂ ಒಳಗೂ ಹೋಗುವಂತಿದೆ. ಈ ಅನುಕೂಲತೆ ಅವುಗಳ ಉಸಿರಾಟಕ್ಕೆ ಸಹಾಯಕ. ಎಲ್ಲ ಭೂಚರ ಕಶೇರುಕಗಳಂತೆಯೇ ಇವುಗಳಲ್ಲಿಯೂ ಹೊರತ್ವಚ ನಿರ್ಜೀವ ಗಡಸುಪೊರೆಯಿಂದ ಕೂಡಿರುತ್ತದೆ ಮತ್ತು ಆಗಿಂದಾಗ್ಗೆ ಪೊರೆ ಉಜ್ಜಿದಂತೆ ವಿಸರ್ಜಿತವಾಗುತ್ತದೆ. ಈ ವಿಸರ್ಜನೆಯನ್ನು ಪಿಟ್ಯುಯಿಟರಿ ಮತ್ತು ಥೈರಾಯ್ಡ್ ಗ್ರಂಥಿಗಳು ನಿಯಂತ್ರಿಸುವುದೆಂದು ತಿಳಿದುಬಂದಿದೆ. ನೆಲಗಪ್ಪೆಗಳ (ಟೋಡ್ಸ್) ಚರ್ಮದಲ್ಲಿ ಅಲ್ಲಲ್ಲಿ ಇರುವ ಗಂಟುಗಳೂ (ವಾಟ್ರ್ಸ್) ಹೊರತ್ವಚದ ಗಡಸುಭಾಗಗಳು. ಹೊರತ್ವಚದ ಜೀವಕೋಶಗಳಿಂದಾದ ಗ್ರಂಥಿಗಳು ಲೋಳೆಯಂಥ ದ್ರವವನ್ನು ಸ್ರವಿಸಿ ಚರ್ಮವನ್ನು ಒದ್ದೆಯಾಗಿಟ್ಟು ಚರ್ಮದ ಮೂಲಕ ಉಸಿರಾಟಕ್ಕೆ ಅನುಕೂಲಮಾಡಿಕೊಡುತ್ತವೆ. ಇತರ ಗ್ರಂಥಿಗಳು ಒಂದು ರೀತಿಯ ವಿಷವಸ್ತುವನ್ನು ಸ್ರವಿಸುತ್ತವೆ. ಈ ವಸ್ತು ಕಣ್ಣಿಗಾಗಲಿ ಮೂಗಿಗಾಗಲಿ ತಾಕಿದರೆ ಬಹುವಾಗಿ ಉರಿಯಾಗುವುದಾದರೂ ಮಾನವನ ಕೈಚರ್ಮದ ಮೇಲೆ ಏನೂ ಪ್ರತಿಕೂಲ ಪರಿಣಾಮವನ್ನು ಮಾಡಲಾರದು. ಆದರೆ ಈ ವಿಷವಸ್ತುವಿನ ಭಯದಿಂದ ಕಪ್ಪೆಯನ್ನು ನುಂಗುವ ಪ್ರಾಣಿಗಳು ಟೋಡುಗಳನ್ನು ನುಂಗವು. ಅನೇಕ ಕಪ್ಪೆಗಳಲ್ಲಿ ಉಷ್ಣತಾನಿಯಂತ್ರಣಕ್ಕಾಗಿ ಮೆಲನಿನ್ ಕಣಗಳು ಜೀವಕೋಶಗಳೊಳಗೆ ಗುಂಪುಮಾಡಿಕೊಂಡಿರುವುದೂ ಇನ್ನು ಕೆಲವು ವೇಳೆ ಕೋಶದೊಳಗೆಲ್ಲ ಹರಡಿಕೊಂಡಿರುವುದೂ ಕಾಣಬರುತ್ತದೆ. ಕಣಗಳ ಈ ಚಲನ ಪಿಟ್ಯುಯಿಟರಿ ಗ್ರಂಥಿಯಿಂದ ನಿಯಂತ್ರಿತವಾಗುವುದು.

ಮೀನುಗಳಲ್ಲಿ ಈಗ ಬಹುಸಂಖ್ಯೆಯಲ್ಲಿ ಕಂಡುಬರುವವು ಟೀಲಿಯಾಸ್ಟ್ ಗುಂಪಿನವು. ಇವುಗಳ ನಿಜತ್ವಚದಲ್ಲಿ ಮೂಳೆಯ ಚೂರುಗಳಿದ್ದು ಅವು ಹೊರತ್ವಚದಿಂದ ಮುಚ್ಚಲ್ಪಟ್ಟಿರುತ್ತವೆ. ಈ ಮೂಳೆಯ ಚೂರುಗಳು ನಿರಂತರವಾಗಿ ಬೆಳೆಯುತ್ತಿರುವುವು. ವೃಕ್ಷಗಳು ದಪ್ಪವಾಗುವಾಗ ಕಂಡುಬರುವ ಬೆಳೆವಣಿಗೆಯ ಉಂಗುರಗಳಂತೆ ಈ ಮೂಳೆಗಳಲ್ಲೂ ಉಂಗುರಗಳು ಕಂಡುಬಂದು ಮೀನಿನ ವಯಸ್ಸನ್ನು ತಿಳಿಯಬಹುದು. ಹೊರತ್ವಚ ಅಧಿಕ ಕೆರಾಟಿನ್ ಸಂಗ್ರಹಣೆಯಿಂದ ಕೊಂಬಿನಷ್ಟು ಗಡುಸಾದ ಪದರ. ಆವರಣದ ಜಲ ದೇಹದ ಒಳಹೊಗದಂತೆ ತಡೆಯಾಗಿರುವುದು ಇದೇ. ಷಾರ್ಕ್ ಅಂದರೆ ಚೊರೆ ಮೀನುಗಳಂಥ ಕೆಳದರ್ಜೆ ಮೃದ್ವಸ್ಥಿ ಮೀನುಗಳಲ್ಲಿ ಚರ್ಮ ಬಹುಮಂದ. ಇದಕ್ಕೆ ಕೆರಾಟಿನ್ ಸಂಗ್ರಹವಾಗಿರುವ ಹೊರತ್ವಚವೇ ಕಾರಣ. ಹೊರತ್ವಚದ ಮೇಲೆ ಮಾನವನ ಹಲ್ಲುಗಳನ್ನು ಹೋಲುವ ರಚನೆಯುಳ್ಳ ಪ್ಲಕಾಯ್ಡ್ ಹುರುಪೆಗಳು ಎಲ್ಲೆಡೆಯೂ ಇವೆ. ದುಂಡುಬಾಯಿಯ ಅತ್ಯಂತ ಕೆಳದರ್ಜೆ ಮೀನುಗಳಲ್ಲಿ ಚರ್ಮ ನುಣ್ಣಗೆ ಮತ್ತು ತೆಳ್ಳಗೆ ಇದ್ದರೂ ಅದರಲ್ಲಿ ಹೊರ ಮತ್ತು ನಿಜತ್ವಚಗಳೆರಡೂ ಇವೆ. ನಿಜತ್ವಚವು ತ್ವಚದ ಅಡಿ ಊತಕದಿಂದ ಹಾಗೂ ವರ್ಣಕೋಶಗಳು ಮತ್ತು ನಾರೆಳೆಗಳಿಂದ ಸ್ಪಷ್ಟವಾಗಿ ಬೇರ್ಪಟ್ಟಿದೆ.
2 ಚರ್ಮದ ಅನುಬಂಧಗಳು (ಅಪೆಂಡೇಜಸ್) : ಕೂದಲು ಮತ್ತು ಉಗುರು ಮಾನವನಲ್ಲಿ ಕಂಡುಬರುವ ಚರ್ಮದ ಅನುಬಂಧಗಳು. ಬೇರೆ ಕೆಲವು ಪ್ರಾಣಿಗಳಲ್ಲಿ ದೊಡ್ಡದಾಗಿ ಬೆಳೆದು ರಕ್ಷಣೆಯಾಗುವ ಪಂಜಗಳು ಮಾನವರಲ್ಲಿ ಪ್ರಾಮುಖ್ಯವನ್ನು ಕಳೆದುಕೊಂಡು ಉಗುರುಗಳಾಗಿವೆ. ಸಣ್ಣವಸ್ತುಗಳನ್ನು ಹಿಡಿದು ಕೊಳ್ಳುವುದಕ್ಕೂ ಸೂಕ್ಷ್ಮವಾದ ಸಾಮಾನುಗಳಿಂದ ಕೆಲಸಮಾಡುವುದಕ್ಕೂ ಮಾತ್ರ ಇವು ಸಾಧಕಗಳು. ಕೆಲವು ಪ್ರಾಣಿಗಳಲ್ಲಿ ರಕ್ಷಣೆಗಾಗಿ ತಲೆಯ ಮೇಲೆ ಕೊಂಬುಗಳು ಬೆಳೆಯುತ್ತವೆ. ಘೇಂಡಾಮೃಗದಲ್ಲಿ ಕೊಂಬು ಮೂಗಿನ ಮೇಲಿರುವುದು ಸರಿಯಷ್ಟೆ. ಇನ್ನು ಕೆಲವು ಪ್ರಾಣಿಗಲ್ಲಿ ಗಟ್ಟಿಯಾದ ನೆಲ ಮತ್ತು ಬಂಡೆಗಳ ಮೇಲೆ ಶೀಘ್ರವಾಗಿ ಓಡಾಡಲು ಅನುಕೂಲವಾಗುವಂಥ ಗೊರಸುಗಳು ಕಂಡುಬರುತ್ತವೆ. ಇವೆಲ್ಲವೂ ಚರ್ಮದ ಅನುಬಂಧಗಳೇ. ಇವಕ್ಕೆ ಸಮವಾಗಿ ಮಾನವರಲ್ಲಿ ಏನೂ ಇಲ್ಲ. ಪಕ್ಷಿಗಳಲ್ಲಿ ಕೂದಲಿಗೆ ಬದಲಾಗಿ ರೆಕ್ಕೆಪುಕ್ಕಗಳು ಚರ್ಮದ ಅನುಬಂಧವಾಗಿರುವುದು ಮೇಲೆ ಹೇಳಿದೆ. ಸಸ್ತನಿಗಳಲ್ಲಿ ಕೂದಲಿನೊಡನೆ ಸ್ವೇದಗ್ರಂಥಿ (ಸೆಬೇಶಿಯಸ್ ಗ್ಲಾಂಡ್) ಉಂಟು. ಆದರೆ ಪಕ್ಷಿಗಳಲ್ಲಿ ಪುಕ್ಕಗಳೊಡನೆ ಇಂಥ ಯಾವ ಗ್ರಂಥಿಯೂ ಇರುವುದಿಲ್ಲ. ಆದರೂ ಪಕ್ಷಿಯ ತೋಕೆ ಪ್ರದೇಶದಲ್ಲಿ ಸ್ವೇದ ಗ್ರಂಥಿಯನ್ನು ಹೋಲುವ ಪ್ರೀನ್ ಎಂಬ ಹೆಸರಿನ ಒಂದು ಗ್ರಂಥಿ ಉಂಟು. ಜಲಚರ ಪಕ್ಷಿಗಳಲ್ಲಿ ಇದು ಬಹುವಾಗಿ ಸ್ರವಿಸುತ್ತದೆ. ಜಿಡ್ಡಾದ ಇದರ ಸ್ರಾವವನ್ನು ಕೊಕ್ಕಿನಿಂದ ತೆಗೆತೆಗೆದು ಹಕ್ಕಿಗಳು ತಮ್ಮ ರೆಕ್ಕೆಪುಕ್ಕಗಳ ಬುಡದಲ್ಲೆಲ್ಲ ಬಳಿದುಕೊಳ್ಳುತ್ತವೆ. ಇದರಿಂದ ಪಕ್ಕಿಗಳ ದೇಹ ಮಳೆನೀರಿನಿಂದಲೂ ಅವರಣದ ನೀರಿನಿಂದಲೂ ತೋಯದಂತಿರುವುದು. ರೆಕ್ಕೆಪುಕ್ಕಗಳು ಪಕ್ಷಿಗಳ ಹಾರಾಟಕ್ಕೂ ಕೆಲವು ವೇಳೆ ರಕ್ಷಣೆಗೂ ಇನ್ನು ಕೆಲವು ವೇಳೆ ಲೈಂಗಿಕ ಆಕರ್ಷಣೆಗೂ ಉಪಯೋಗವಾಗುತ್ತವೆ. ಪಕ್ಷಿಗಳ ಕೊಕ್ಕು ಕಾಲುಗುರುಗಳು ಕೂಡ ಚರ್ಮದ ಅನುಬಂಧಗಳೇ. ಪಕ್ಷಿಗಳ ಪರಿಸರ ಜೀವನಕ್ರಮಗಳಿಗೆ ಅನುಸಾರವಾಗಿ ಇವುಗಳ ವಿನ್ಯಾಸ ಬಹುರೀತಿಯಲ್ಲಿರುವುದು. ಆಹಾರವಿತರಣೆಗೇ ಅಲ್ಲದೆ ರಕ್ಷಣೆಗೂ ಈ ಅನುಬಂಧಗಳು ಅನುಕೂಲವಾಗುತ್ತವೆ.

ಕೂದಲು : ಇದು ಚರ್ಮದೊಳಗೆ ಹುದುಗಿರುವ ರೋಮಕೂಪದಲ್ಲಿ (ಹೇರ್ ಫಾಲಿಕಲ್) ನೆಟ್ಟುಕೊಂಡಿದೆ. ಕೂಪದಲ್ಲಿ ಹುದುಗಿರುವ ಭಾಗ ಕೂದಲಿನ ಬೇರು. ರೋಮಕೂಪ ಮತ್ತು ಕೂದಲು ಎರಡೂ ಹೊರತ್ವಚದ ಕೋಶಗಳಿಂದಾದವೇ. ಹೊರತ್ವಚದ ಒಂದು ಗುಳಿ ನಿಜತ್ವಚದೊಳಗೆ ಇಳಿಬಿದ್ದು ಆಳವಾಗಿ ಬೆಳೆದು ನಿಜತ್ವಚದಲ್ಲಿ ರೋಮಕೂಪವಾಗುವುದು. ಇದರ ಕೊನೆ ಬುಡ್ಡೆ (ಬಲ್ಬ್) ಆಕಾರದಲ್ಲಿದೆ. ನಿಜತ್ವಚದ ಊತಕ ಸ್ತನಾಗ್ರದ ಆಕಾರದಲ್ಲಿದೆ. ಇದರ ಮೇಲೆ ಒಂದೇ ವರಸೆಯಾಗಿ ಅಳವಡಿಕೆಗೊಂಡಿರುವ ಹೊರತ್ವಚದ ಗುಳಿಯ ಜೀವಕೋಶಗಳು ಮಾತೃಕೆ ಜೀವಕೋಶಗಳಂತೆ ವರ್ತಿಸುತ್ತವೆ. ಇವುಗಳ ವಿಭಜನೆಯಿಂದ ಕೂದಲು ಬೆಳೆಯುವುದೇ ಅಲ್ಲದೆ ಗಾಯದಿಂದ ಹೊರತ್ವಚ ನಾಶವಾದಾಗ ಹೊಸ ಹೊರತ್ವಚ ನಿರ್ಮಾಣವಾಗಿ ರಿಪೇರಿಯೂ ಸಾಧ್ಯವಾಗುತ್ತದೆ.

ನಿಜತ್ವಚದೊಳಗೆ ಹುದುಗಿರುವ ರೋಮಕೂಪದ ಭಿತ್ತಿಯಲ್ಲಿ ಮೂರು ಪದರಗಳನ್ನು ಗುರುತಿಸಬಹುದು. ಕೂಪದ ಒಳವರಸೆ ನಿರ್ಜೀವಪದರದಿಂದಾಗಿದೆ. ಇದರ ಹೊರಗೆ ಜೀವಕೋಶಗಳ ಎರಡು ಪದರಗಳನ್ನೂ ಇವನ್ನು ಸುತ್ತಲಿನ ನಿಜತ್ವಚದ ಊತಕದಿಂದ ಬೇರ್ಪಡಿಸುವ ತಳಹದಿಪದರವನ್ನೂ ಗುರುತಿಸಬಹುದು. ಕೂದಲ ಬುಡ್ಡೆಯಿಂದ ಬೆಳೆಯುವ ಕೂದಲು ಟೊಳ್ಳಿಲ್ಲದ ತಂತು. ಇದರಲ್ಲೂ ಮೂರು ವರಸೆ ರಚನೆ ಉಂಟು. ಆದರೆ ಇದರ ಹೊರವರಸೆ ನಿರ್ಜೀವಪದರ. ಕೂದಲಿನ ಹೊರವರಸೆ, ರೋಮಕೂಪದ ಒಳವರಸೆ ಎರಡಕ್ಕೂ ಸಣ್ಣಮುಳ್ಳುಗಳಂತಿರುವ ಚಾಚುಗಳು ಕೆಳಮುಖವಾಗಿಯೂ ಇದ್ದು, ಇವು ಒಂದರೊಳಗೊಂದು ಸೇರಿಕೊಂಡು ಕೂದಲು ಕೂಪದೊಳಗೆ ಭದ್ರವಾಗಿ ನೆಡಲ್ಪಟ್ಟಿರುತ್ತದೆ. ಹೀಗಾಗಿ ಕಿತ್ತಾಗ ಇದು ಛಿದ್ರಿಸಿ ಬರುವುದೇ ಹೊರತು ಸುಲಭವಾಗಿ ಬುಡಮೂಲವಾಗಿ ಬರುವುದಿಲ್ಲ. ಕೂದಲ ಹೊರವರಸೆ ಕೂಪದಿಂದ ಹೊರಗೆ ಸ್ವಲ್ಪದೂರ ಮಾತ್ರ ಕೂದಲಿನಲ್ಲಿ ಕಂಡುಬರುತ್ತದೆ ಮತ್ತು ಕ್ರಮೇಣ ಇಲ್ಲವಾಗುತ್ತದೆ. ಈ ವರಸೆಯ ಒಳಗಿರುವುದು ಸಮೃದ್ಧಿಯಾಗಿ ಮೆಲನಿನ್ ಕಣಗಳಿರುವ ಜೀವಕೋಶಗಳಿಂದಾದ ಕೂದಲ ರಗಟೆ (ಕಾರ್ಟೆಕ್ಸ್). ಕೂದಲಿನ ಬಣ್ಣ ಈ ಜೀವಕೋಶಗಳಲ್ಲಿರುವ ಮೆಲನಿನ್ ಕಣಗಳ ಪರಿಮಾಣವನ್ನು ಅವಲಂಬಿಸಿದೆ. ಕೂದಲಮಧ್ಯದಲ್ಲಿರುವುದು ಕೂದಲಿನ ತಿಳ್ಳು (ಮೆಡುಲ್ಲ). ಇದು ಸಹ ಜೀವಕೋಶಗಳಿಂದಾದುದಾದರೂ ಕೂದಲಿನಲ್ಲಿ ಸ್ವಲ್ಪದೂರ ಮಾತ್ರ ಈ ಕೋಶಗಳಿವೆಯಷ್ಟೆ. ಕ್ರಮೇಣ ಇವುಗಳ ಸ್ಥಳದಲ್ಲಿ ಅನಿಲ ಕಂಡುಬರುತ್ತದೆ. ಅನಿಲ ಪರಿಮಾಣದ ಆಧಿಕ್ಯವೂ ಕೂದಲಿನ ರಗಟೆಯಲ್ಲಿ ಮೆಲನಿನ್ನಿನ ಅಭಾವವೂ ಕೂದಲು ಬೆಳ್ಳಗಾಗುವುದಕ್ಕೆ ಕಾರಣ.

ಕೂದಲ ಬೆಳೆವಣಿಗೆ ಒಂದು ನಿರ್ದಿಷ್ಟ ಕಾಲದವರೆಗೆ ಮಾತ್ರ ಇರುವುದು. ಅನಂತರ ಬೆಳೆವಣಿಗೆ ಇಲ್ಲದೆ ತಟಸ್ಥವಾಗಿರುವ ಕಾಲ. ಈ ಕಾಲದಲ್ಲಿ ಕ್ರಮೇಣ ಕೂದಲು ಕೂಪದ ಅಡಿಯಲ್ಲಿರುವ ಮಾತೃಕೆ ಕೋಶಗಳಿಂದ ಬೇರ್ಪಡುತ್ತದೆ ವಾಸ್ತವವಾಗಿ ಆಗ ಅದು ಸತ್ತ ಕೂದಲು. ಆದರೂ ಅದು ಇನ್ನೂ ಕೂಪದಲ್ಲೆ ಇರುತ್ತದೆ. ಮುಂದೆ ಕೂಪದ ಭಿತ್ತಿಯಿಂದಲೂ ಕ್ರಮೇಣ ಸಡಿಲಗೊಂಡು, ಕೂದಲು ಬುಡ್ಡೆಯ ಚಟುವಟಿಕೆ ಪುನಃ ಪ್ರಾರಂಭವಾಗಿ ಹೊಸ ಕೂದಲು ಅದೇ ಕೂಪದಿಂದ ಹೊರಬಂದಂತೆ, ಈ ಸತ್ತ ಕೂದಲು ಉದುರಿಹೋಗುತ್ತದೆ. ಹೀಗೆ ಬುಡ್ಡೆಯಿಂದ ಪುನಃಪುನಃ ಕೂದಲು ಹುಟ್ಟಿ ಬೆಳೆದು ಉದುರುತ್ತಲೇ ಇರುವುದು. ಈ ಕ್ರಮದ ಕಾಲಮಿತಿ ದೇಹದ ಬೇರೆ ಬೇರೆ ಕಡೆ ಬೇರೆ ಬೇರೆ. ಕಾಲು ಮತ್ತು ಜನನೇಂದ್ರಿಯಗಳ ಮೇಲಿನ ಕೂದಲು ಹುಟ್ಟಿಬೆಳೆದು ಉದುರುವುದಕ್ಕೆ ಬಹುಕಾಲ ತೆಗೆದುಕೊಳ್ಳುವುವೆಂದು ತಿಳಿದುಬಂದಿದೆ.

ತೀವ್ರವಾದ ಜ್ವರ, ಅಧಿಕರಕ್ತಸ್ರಾವ, ಭಾರಿ ಶಸ್ತ್ರಚಿಕಿತ್ಸೆ ಮುಂತಾದ ತೊಡಕುಗಳು ಒದಗಿದಾಗ ಕೂದಲು ಬೆಳೆವಣಿಗೆ ನಿಂತುಹೋಗಿ ಅದು ಮಾತೃಕೆಯಿಂದ ಬೇರ್ಪಡುವುದಕ್ಕೆ ಪ್ರಾರಂಭವಾಗುತ್ತದೆ. ತಲೆಯಲ್ಲಿ ಎಲ್ಲ ಕೂದಲೂ ತಟಸ್ಥಸ್ಥಿತಿಯಲ್ಲಿದ್ದು ಇಂಥ ತೊಡಕು ಉಂಟಾದ 2-4 ತಿಂಗಳ ಬಳಿಕ ಇನ್ನೊಂದು ಕೂದಲು ಎಲ್ಲ ರೋಮಕೂಪಗಳಿಂದಲೂ ಹುಟ್ಟಲು ತೊಡಗುತ್ತದೆ. ಆಗ ಹಳೆಯ ಕೂದಲು ಒಟ್ಟೊಟ್ಟಿಗೆ ಉದುರಿಹೋಗುವುದು. ಹೆರಿಗೆಯ ತುರುವಾಯ ಬಾಣಂತಿಯರಲ್ಲಿ ಇದೇ ರೀತಿಯ ಬದಲಾವಣೆಯಿಂದ ಕೂದಲು ಉದುರುತ್ತದೆ.

ರೋಮಕೂಪ ಚರ್ಮದ ತಲಕ್ಕೆ (ಪ್ಲೇನ್) ಲಂಬವಾಗಿರುವುದಿಲ್ಲ. ಸ್ವಲ್ಪ ಓರೆಯಾಗಿರುತ್ತದೆ. ಈ ಓರೆ ದಿಕ್ಕಿಗೆ ಎದುರಾಗಿ ಓರೆಯಾಗಿ ಒಂದು ಪಟ್ಟಿಯಾಕಾರದ ಸ್ನಾಯು ರೋಮಕೂಪದ ಮೇಲ್ಭಾಗದ ಭಿತ್ತಿಯನ್ನೂ ಹೊರತ್ವಚದ ತಳಭಾಗವನ್ನೂ ಕೂಡಿಸುತ್ತದೆ. ಇದು ಅನೈಚ್ಛಿಕಸ್ನಾಯು. ರೋಮಾಂಚನವಾದಾಗ ಕೂದಲನ್ನು ನಿಮಿರಿಸುವ ಸ್ನಾಯು ಇದೇ. ಸಂಕುಂಚಿಸಿದಾಗ ಇದು ರೋಮಕೂಪದ ಓರೆಯನ್ನು ಕಡಿಮೆಮಾಡುವುದರಿಂದ ಕೂದಲು ನೆಟ್ಟಗೆ ನಿಂತಂತೆ ಆಗುತ್ತದೆ. ಸಂಕುಂಚನೆ ನರಪ್ರೇರಣೆಯಿಂದ ಮೈಮೇಲೆಲ್ಲ ಇಲ್ಲವೆ ಸ್ವಲ್ಪ ಭಾಗಗಳಲ್ಲಿ ಉಂಟಾಗುತ್ತದೆ. ಈ ರೋಮಾಂಚಕ ಸ್ನಾಯುಗಳಿಗೆ (ಎರೆಕ್ಟೊರಿಸ್ ಪೈಲೋರಮ್) ನರಪೂರೈಕೆ ಅನುವೇದನ ನರಗಳಿಂದಾಗುವುದರಿಂದ ದೇಹದಲ್ಲಿ ಅಡ್ರಿನಲಿನ್ ಬಿಡುಗಡೆ ಆದಾಗಲೆಲ್ಲ ರೋಮಾಂಚನವಾಗುತ್ತದೆ.

ರೋಮಕೂಪಕ್ಕೂ ರೋಮಾಂಚಕ ಸ್ನಾಯುವಿಗೂ ನಡುವೆ ಸಾಮಾನ್ಯವಾಗಿ ಒಂದೋ ಎರಡೋ ಸ್ವೇದಗ್ರಂಥಿಗಳು (ಸಬೇಶಿಯಸ್ ಗ್ಲಾಂಡ್ಸ್) ಇವೆ. ಜಿಡ್ಡಾದ ಸ್ರಾವವನ್ನು ಇವು ತಮ್ಮ ನಾಳಗಳ ಮೂಲಕ ರೋಮಕೂಪದೊಳಕ್ಕೆ ಹಾಯಿಸುತ್ತವೆ. ಬಹುಶಃ ಕೂದಲು ನಿಮಿರಿದಾಗ, ರೋಮಾಂಚಕ ಸ್ನಾಯುಗಳ ಸಂಕುಂಚನದಿಂದ ಒತ್ತಲ್ಪಟ್ಟ ಸ್ನೇಹಗ್ರಂಥಿಗಳಿಂದ ಹೀಗೆ ಸ್ರಾವ ರೋಮಕೂಪವನ್ನು ಸೇರುವುದಲ್ಲದೆ, ಕೂಪಚಲನದಿಂದ ಅದರ ಹೊರಗೂ ಬರುತ್ತದೆ ಎಂದು ಕಾಣಿಸುತ್ತದೆ. ಹಾಗಿಲ್ಲದಿದ್ದರೂ ರೋಮಕೂಪವನ್ನು ಸೇರಿದ ಈ ಸ್ನಿಗ್ಧಪದಾರ್ಥ ಕೂಪದಿಂದ ಹೊರಬರುತ್ತಿರುವ ಕೂದಲನ್ನೆ ಅನುಸರಿಸಿ ಹೊರಬೀಳುವುದು. ಇದು ಸುತ್ತಲೂ ಚರ್ಮದ ಮೇಲೆ ಹರಡಿಕೊಳ್ಳುವುದಲ್ಲದೆ ಕೂದಲ ಮೇಲೂ ಹರಡಿಕೊಂಡು ಚರ್ಮವನ್ನೂ ಕೂದಲನ್ನೂ ಮೃದುವಾಗಿರುವಂತೆ ಮಾಡುತ್ತದೆ. ಸ್ವೇದಗ್ರಂಥಿಯ ಸ್ರಾವ ಈ ಗ್ರಂಥಿಯ ಜೀವಕೋಶ ಪೂರ್ಣವಾಗಿ ಹೊರಬಿದ್ದು ಜಿಡ್ಡುಪದಾರ್ಥವಾಗಿ ಮಾರ್ಪಡುವುದರಿಂದ ಉಂಟಾದುದು. ಇದು ಕೊಬ್ಬು ಮತ್ತು ಮೇಣದ ಮಿಶ್ರಣ. ಅಲ್ಲದೆ ಕೊಬ್ಬಿನ ಆಮ್ಲಗಳು, ಕೊಲೆಸ್ಟಿರಾಲ್ ಮತ್ತು ಅನೇಕ ಹೈಡ್ರೊಕಾರ್ಬನುಗಳೂ ಇವೆ. ನೀರಿನಲ್ಲಿ ಮುಳುಗಿದಾಗ ಚರ್ಮಕೂದಲುಗಳು ಒದ್ದೆಯಾದರೂ ನೀರು ಅವುಗಳ ಒಳಸೇರದಂತೆಯೂ ಒಣ ವಾತಾವರಣದಲ್ಲಿ ಚರ್ಮ ಒಣಗಿ ಒರಟಾಗಿ ಬಿರಿಯದಂತೆಯೂ ಕೂದಲು ಒರಟಾಗದಂತೆಯೂ ಕಾಪಾಡುವುದು ಈ ಸ್ರಾವದ ಕ್ರಿಯೆ. ಇದಕ್ಕೆ ಕೆಲವು ವಿಷಾಣುಗಳನ್ನೂ ಬೂಷ್ಟುಗಳನ್ನೂ ನಾಶಮಾಡುವ ಸಾಮಥ್ರ್ಯ ಉಂಟೆಂದು ಹೇಳಲಾಗಿದೆ. ಪ್ರಬುದ್ಧತೆಯ ಕಾಲದಲ್ಲಿ ಇವುಗಳ ಚಟುವಟಿಕೆ ಹೆಚ್ಚು. ಕೆಲವರಲ್ಲಿ ಈ ಗ್ರಂಥಿಗಳು ಯಾವಾಗಲೂ ಹೆಚ್ಚಾಗಿ ಸ್ರವಿಸುವುದರಿಂದ ಮುಖ ಎಣ್ಣೆ ಬಳಿದಂತೆ ಕನುಗಾಗಿರುತ್ತದೆ. ಸ್ವೇದಗ್ರಂಥಿಗಳ ಸ್ರಾವ ಹೊರಕ್ಕೆ ಬರಲು ಅಡಚಣೆಯಾಗಿ ಸೋಂಕಿನಿಂದ ಊತ ಉಂಟಾದರೆ ಮೊಡವೆ ಏಳುತ್ತದೆ. ಕಣ್ಣುರೆಪ್ಪೆಗಳಲ್ಲಿರುವ ಮೈಬೋಮಿನ ಗ್ರಂಥಿಗಳೂ ಸ್ವೇದಗ್ರಂಥಿಗಳ ಜಾತಿಗೇ ಸೇರಿದವು. ಸ್ವೇದಗ್ರಂಥಿಗಳು ಸಾಮಾನ್ಯವಾಗಿ ರೋಮಕೂಪಗಳಿಗೆ ಸಂಬಂಧಪಟ್ಟಂತೆ ಇರುವುವಾದರೂ ತುಟಿಗಳ ಕೆಂಪಂಚು ಮುಂತಾದ ಕೂದಲು ಬೆಳೆಯದ ಸ್ಥಳಗಳಲ್ಲಿಯೂ ಇವು ಕಂಡು ಬರುತ್ತವೆ. ಆದರೆ ಅಂಗೈ ಅಂಗಾಲುಗಳಲ್ಲಿ ಸ್ವೇದಗ್ರಂಥಿಗಳಿರುವುದಿಲ್ಲ. ತುಪ್ಪುಳವಿರುವ ಪ್ರಾಣಿಗಳಲ್ಲಿ ತುಪ್ಪುಳಗಳಿಗೆ ಸಂಬಂಧಿಸಿದ ಜಿಡ್ಡುಗ್ರಂಥಿಗಳು ನೇರವಾಗಿ ಹೊರಕ್ಕೆ ತಮ್ಮ ಸ್ರಾವವನ್ನು ಸಾಗಿಸಿ ತುಪ್ಪುಳದ ಅಧಿಕ ಜಿಡ್ಡಿಗೆ ಕಾರಣವಾಗಿವೆ.

ಉಗುರುಗಳು : ಕೈಕಾಲು ಬೆರಳುಗಳ ತುದಿಯ ಬೆನ್ನುಭಾಗದಲ್ಲಿರುವ ಚರ್ಮದ ಹೊರತ್ವಚದ ಗಡಸು ಹೊರಪೊರೆ ಮಾರ್ಪಾಡಾಗಿ ಉಗುರಾಗುತ್ತದೆ. ಕೆರಾಟಿನ್ ತುಂಬಿದ ಹೊರಪೊರೆಯ ತಟ್ಟೆಕಣಗಳು ಸುಲಿದುಹೋಗದೆ ಒಂದಕ್ಕೊಂದು ಒತ್ತಾಗಿ ಕೂಡಿಕೊಂಡಿರುವುದರಿಂದ ಉಗುರು ಉಂಟಾಗುತ್ತದೆ ಉಗುರಿನ ಬುಡದಲ್ಲಿ ಚರ್ಮದ ಮಡಿಕೆಯ ಹೊದಿಕೆ ಉಂಟು. ಈ ಭಾಗದಲ್ಲಿ ಉಗುರಿನ ಕೆಳಗಿರುವ ಹೊರತ್ವಚದ ಜೀವಕೋಶಗಳು ಉಗುರಿನ ಮಾತೃಕೆಯಾಗಿರುತ್ತವೆ. ಇವುಗಳ ನಿರಂತರ ವಿಭಜನೆಯಿಂದ ಲಭಿಸುವ ಜೀವಕೋಶಗಳು ಶೀಘ್ರವಾಗಿ ಮತ್ತು ಅಧಿಕವಾಗಿ ಕೆರಾಟಿನ್ನನ್ನು ಉತ್ಪತ್ತಿಮಾಡಿ ಸಂಗ್ರಹಗೊಂಡು ನಿರ್ಜೀವ ಉಗುರುವಸ್ತುವಾಗುತ್ತವೆ; ಮತ್ತು ಮುಂಚೆ ಇದೇ ರೀತಿ ಉತ್ಪತ್ತಿಯಾಗಿದ್ದ ಉಗುರನ್ನು ಅದರ ಹಾಸಿಗೆ (ನೆಯ್ಲ್‍ಬೆಡ್) ಭದ್ರವಾಗಿ ಅಂಟಿಸಿರುತ್ತವೆ. ಉಗುರು ಹಾಸಿನಲ್ಲಿರುವ ನಿಜತ್ವಚದ ಚಾಚುಗಳು ಉಗುರಿನ ಬುಡದಿಂದ ತುದಿಯ ವರೆಗೂ ಕಂಡುಬರುವ ಉದ್ದವಾದ ಸಾಲುಗಳು. ಹೊಸತಾಗಿ ಉತ್ಪತ್ತಿಯಾದ ಉಗುರು ಬೆಳೆದು ಉಗುರಿನ ಕೊನೆ ಮುಟ್ಟುವುದಕ್ಕೆ ಸುಮಾರು 5-6 ತಿಂಗಳುಗಳು ಬೇಕೆಂದು ಅಂದಾಜುಮಾಡಿದ್ದಾರೆ. ಹವಾ ಪರಿಸ್ಥಿತಿಯಂತೆ ಬೆಳೆವಣಿಗೆಯ ವೇಗದಲ್ಲಿ ವ್ಯತ್ಯಾಸವಾಗುವುದು. ಮಧ್ಯದ ಬೆರಳಿನ ಉಗುರು ಎಲ್ಲಕ್ಕಿಂತ ಹೆಚ್ಚು ವೇಗವಾಗಿಯೂ ಕಿರುಬೆರಳಿನದು ಎಲ್ಲಕ್ಕಿಂತ ನಿಧಾನವಾಗಿಯೂ ಬೆಳೆಯುವುದು. ಕಾಲಿನ ಉಗುರು ಕೈಬೆರಳಿನ ಉಗುರಿಗಿಂತ ಎರಡರಷ್ಟು ಕಾಲ ತೆಗೆದುಕೊಳ್ಳುತ್ತದೆ. ಈ ಕಾರಣದಿಂದ ಕಾಲುಗುರಿನ ಅಣಬೆರೋಗವನ್ನು ಅಣಬೆ ನಿರೋಧಕ ಮದ್ದುಗಳಿಂದ ಗುಣಪಡಿಸುವುದು ದುಸ್ಸಾಧ್ಯ. ಯಾವೊಂದು ವಿಷಮ ರೋಗದಿಂದಲಾದರೂ ನರಳಿದಾಗ ಉಗುರುಗಳ ಪೋಷಣೆ ತಗ್ಗಿ ಮಾತೃಕೆಯ ಬೆಳೆವಣಿಗೆ ಕುಗ್ಗಿ ಉಗುರುಗಳಲ್ಲಿ ಅಡ್ಡ ಜಾಡುಗಳಾಗುತ್ತವೆ. ಉಗುರುಗಳ ಮೇಲೆ ಕಾಣಿಸಿಕೊಳ್ಳುವ ಬಿಳಿ ಚುಕ್ಕೆಗಳು ಪೆಟ್ಟುಗಳಿಂದ ಉಂಟಾಗುತ್ತವೆ. ಬಹುಶಃ ಉಗುರುಹಾಸಿನಲ್ಲಿರುವ ಹೊರತ್ವಚದ ಕೋಶಗಳು ಗಾಯಗೊಂಡು ಕೆರಾಟಿನ್ನನ್ನು ಒಳಗೊಂಡಿರುವುದರಿಂದ ಹೀಗೆ ಬಿಳಿ ಚುಕ್ಕೆಯಾಗಿ ಕಾಣಿಸಬಹುದು.
(ಡಿ.ಪಿ.ಜೆ.; ಎಸ್.ಆರ್.ಆರ್.)

3 ಜ್ಞಾನೇಂದ್ರಿಯವಾಗಿ ಚರ್ಮದ ಕ್ರಿಯೆ : ಚರ್ಮದಲ್ಲಿ ನರತಂತುಗಳು ಹೇರಳವಾಗಿವೆ; ಮತ್ತು ಪಂಚೇಂದ್ರಿಯಗಳಲ್ಲಿ ಚರ್ಮ ಒಂದು ಎಂದು ಮೇಲೆ ಸೂಚಿಸಿದೆ. ಚರ್ಮದ ನೆರವಿನಿಂದ ಲಭಿಸುವ ಜ್ಞಾನಕ್ಕೆ ಪ್ರಾಯಿಕಜ್ಞಾನ (ಜನರಲ್ ಸೆನ್ಸ್) ಎಂದು ಹೆಸರು. ಈ ಜ್ಞಾನ ದೇಹದ ಮೇಲ್ಮೈಯ ಎಲ್ಲ ನೋವಿನ ಅರಿವಿಗೆ ಸಂಬಂಧಪಟ್ಟಿದೆ. ಇದರ ಪರಿಣಾಮವಾಗಿ ಜೀವಿಗೆ ತನ್ನ ಮೈಯನ್ನು ಆವರಿಸಿರುವ ಪರಿಸರಕ್ಕೆ ಹೊಂದಿಕೊಳ್ಳಲೂ ಅದು ಅಪಾಯಕರವಾಗಿದ್ದರೆ ಅದರ ವಿರುದ್ಧ ರಕ್ಷಣೆಪಡೆಯಲೂ ತಿಳಿದಂತೆ ಮತ್ತು ತಿಳಿಯದಂತೆ ಉಂಟಾಗಬೇಕಾದ ಪ್ರತಿಕ್ರಿಯೆಗಳನ್ನು ನಿಯಂತ್ರಿಸಲೂ ಸಾಧ್ಯವಾಗಿದೆ. ನೋವಿನ ಅರಿವು ನಗ್ನನರಾಗ್ರಗಳಿಂದ ಆಗುತ್ತದೆ. ಸ್ಪರ್ಶ, ಒತ್ತುವಿಕೆ, ತಂಡಿ ಮತ್ತು ಬಿಸಿ ಇವುಗಳ ಅರಿವು ವಿಶಿಷ್ಟ ನರಾಗ್ರಗಳಾದ ಮೆಕ್ಕೆಲನ ತಟ್ಟೆ ಹಾಗೂ ಮೀಸ್ನರನ ಕಣಗಳು, ಪೆಸಿನಿಯ ಕಣಗಳು, ಕ್ರೌಸನ ಅಂತ್ಯ ಬುಡ್ಡೆಗಳು ಮತ್ತು ರೂಫಿನಿಯ ನರಾಂತ್ಯಾಂಗಗಳಿಂದ ಆಗುತ್ತದೆ. ವಿವಿಧ ಸಂದರ್ಭದಗಳಲ್ಲಿ ಒಂದೋ ಎರಡೋ ಸಂವೇದನೆಗಳು ಮಾತ್ರ ನಾಶವಾಗಿ ಇತರ ಸಂವೇದನೆಗಳು ಸಹಜವಾಗಿಯೇ ಇರಬಹುದಾದ್ದರಿಂದ, ಹೊರಪ್ರಜೋದನೆಗಳ ಸ್ವಭಾವ ವ್ಯತ್ಯಾಸಗಳಲ್ಲದೆ ನರಾಗ್ರಗಳಲ್ಲಿ ಉದ್ಭವವಾಗುವ 

ನರಪ್ರಜೋದನವ್ಯತ್ಯಾಸಗಳೂ ವಿವಿಧಸಂವೇದನೆಗಳ ವಿಶಿಷ್ಟ ಅರಿವು ಮೂಡುವುದಕ್ಕೆ ಕಾರಣ ಎಂದು ತಿಳಿಯಬಹುದು. ಉಸಿರು ಕಟ್ಟಿದಾಗ (ಆಸ್‍ಫಿಕ್ಸಿಯ) ತಾತ್ಕಾಲಿಕವಾಗಿ ಸ್ಪರ್ಶಜ್ಞಾನ ಮೊದಲು ನಾಶವಾಗುತ್ತದೆ. ಅತಿಯಾದ ಚಳಿಯಿಂದ ಮೊದಲು ತಂಡಿ, ಆಮೇಲೆ ಅನುಕ್ರಮವಾಗಿ ಸ್ಪರ್ಶ, ನೋವು, ಬಿಸಿ-ಇವು ತಿಳಿಯದಂತಾಗುತ್ತವೆ. ಹೀಗೇ ಕೊಕೇನ್ ಎಂಬ ಸಂವೇದನನಾಶಕ ಚುಚ್ಚುಮದ್ದನ್ನು ಕೊಟ್ಟರೆ ಮೊದಲು ತಂಡಿಯ ಅರಿವು ನಾಶವಾಗುತ್ತದೆ. ನರದ ಸುತ್ತ ಆಲ್ಕೊಹಾಲನ್ನು ಚುಚ್ಚುಮದ್ದಿನ ರೀತಿ ಕೊಟ್ಟರೆ ಪ್ರಧಾನವಾಗಿ ನಾಶವಾಗುವುದು ಶೀತೋಷ್ಣಗಳ ಸಂವೇದನೆ. ಸ್ಪರ್ಶ ನೋವುಗಳು ಅಷ್ಟಾಗಿ ವ್ಯತ್ಯಾಸವಾಗುವುದಿಲ್ಲ. ವಿಶಿಷ್ಟ ನರಾಗ್ರಗಳ ರಚನೆ ಹೆಚ್ಚು ಕಡಿಮೆ ಒಂದೇ ರೀತಿಯದಾಗಿದೆ. ನಡುಮಧ್ಯದಲ್ಲಿ ತಿರುಳಿನಂತೆ ನಗ್ನನರಾಗ್ರ ಉಂಟು, ಮೃದುವಾದ ಜೀವಕೋಶಗಳೂ ಅವುಗಳ ಹೊರಗೆ ಪದರಪದರವಾಗಿರುವ ಬಂಧನಾಂಗಾಂಶದ ಕವಚವೂ ಇದನ್ನು ಆವರಿಸಿಕೊಂಡಿವೆ. ವಿವರ ವ್ಯತ್ಯಾಸಗಳಿಂದ ವಿವಿಧ ನರಾಗ್ರಗಳನ್ನು ಗುರುತಿಸಬಹುದಾದರೂ ಅನೇಕವೇಳೆ ವ್ಯತ್ಯಾಸ ಸ್ಪಷ್ಟವಾಗಿರುವುದಿಲ್ಲ. ಮೆಕ್ಕೆಲನ ತಟ್ಟೆಗಳು ಬೆರಳುಗಳ ತುದಿಯಲ್ಲಿಯೂ ತುಟಿ ಬಾಯಿಗಳಲ್ಲಿಯೂ ಇವೆ. ನಿಜತ್ವಚದಲ್ಲಿ ಹಾಗೂ ಹೊರತ್ವಚದ ಕೆಳಭಾಗದ ಜೀವಕೋಶಗಳ ನಡುವೆ ಇವು ಕಂಡುಬರುವುವು. ಮೀಸ್ನರನ ಕಣಗಳು ನಿಜತ್ವಚದ ಬೆರಳಿನಿಂದ ಹೊರಚಾಚುಗಳಲ್ಲಿ ಹುದುಗಿರುವ ಅಂಡಾಕಾರದ ಮೊಗ್ಗುಗಳಂತೆ ಇವೆ. ಇವುಗಳ ತಳದಿಂದ ಜ್ಞಾನವಾಹಿ ನರತಂತು ಹೊರಟು ಇತರ ತಂತುಗಳೊಡಗೂಡಿ ಕೊನೆಗೆ ಮಿದುಳ ಬಳ್ಳಿ ಹಾಗೂ ಮಿದುಳನ್ನು ಸೇರುತ್ತದೆ. ಪೆಸಿನಿಯ ಕಣಗಳು ಆಕಾರ ಮತ್ತು ವಿನ್ಯಾಸಗಳಲ್ಲಿ ನೀರುಳ್ಳಿಯ ಲಂಬಕೊಯ್ತವನ್ನು ಹೋಲುವುವು. ಇವು ಇನ್ನಿತರ ನರಾಗ್ರಗಳಿಗಿಂತ ದೊಡ್ಡವಾಗಿ ದಪ್ಪ ಸಾಸಿವೆಕಾಳಿನ ಗಾತ್ರಕ್ಕೆ ನಿಜತ್ವಚದಲ್ಲಿವೆ. ಕೈಕಾಲುಗಳ ಚರ್ಮದ ಅಡಿ ಊತಕದಲ್ಲಿಯೂ ಸ್ನಾಯುಹುರಿ, ಕೀಲುಕವಚ ಮುಂತಾದ ಕಡೆಯೂ ಪೆಸಿನಿಯ ಕಣಗಳು ಬಹುಸಂಖ್ಯೆಯಲ್ಲಿವೆ. ಒತ್ತುವಿಕೆಯಿಂದ ಆಗುವ ರೂಪ ಪಲ್ಲಟದಿಂದ ಇವು ಉದ್ರೇಕಗೊಂಡು ಒತ್ತುವಿಕೆಯ ಅರಿವನ್ನು ಉಂಟುಮಾಡುವುವು. ಕ್ರೌಸನ ಅಂತ್ಯಗೊಳಗಳು ತುಟಿ, ನಾಲಗೆ, ಹಾಗೂ ಬಾಹ್ಯ ಪ್ರಜನನಾಂಗಗಳ ಚರ್ಮದಲ್ಲಿ ಹೆಚ್ಚಾಗಿವೆ. ಇವು ಗೋಳಾಕಾರವಾಗಿರುವುದು ಬಿಟ್ಟರೆ ಸ್ಪರ್ಶಕಣಗಳಂತೆಯೇ ಇವೆ. ಚರ್ಮ ತಣ್ಣಗಾದಾಗ ಇವು ಪ್ರಜೋದನೆಗೊಂಡು ತಂಡಿಯನ್ನು ಅರಿವಿಗೆ ತರುವುವು. ರೂಫಿನಿಯ ಅಂತ್ಯಾಂಗಗಳು ಚರ್ಮ ಬಿಸಿಯಾದಾಗ ಪ್ರಚೋದನೆಗೊಳ್ಳುತ್ತವೆ.

ಸಾಮಾನ್ಯವಾಗಿ ಬರಿ ಕಣ್ಣಿಗೆ ಕಾಣಿಸುತ್ತೋ ಇಲ್ಲವೋ ಎನ್ನುವಷ್ಟು ಸಣ್ಣವಾದ ಈ ವಿಶಿಷ್ಟ ನರಾಗ್ರಗಳು ಇರುವ ಬಿಂದು ಕ್ಷೇತ್ರದಲ್ಲಿ (ಸ್ಪಾಟ್) ಆಯಾ ಪ್ರಾಯಿಕ ಜ್ಞಾನದ ಅರಿವು ಉಂಟಾಗುತ್ತದೆಂದು ಪ್ರಯೋಗ ಪರೀಕ್ಷೆಗಳಿಂದ ಸುಮಾರು 70-80 ವರ್ಷಗಳ ಹಿಂದೆ ವಿಜ್ಞಾನಿಗಳು ಶೋಧಿಸಿದರು. ಆಧುನಿಕ ರೀತಿಯ ಪ್ರಯೋಗಗಳಿಂದಲೂ ಅದು ಹೆಚ್ಚುಕಡಿಮೆ ಸರಿ ಎಂದು ತಿಳಿದುಬಂದಿದೆ. ಆದರೆ ಹಿಂದಿನವರು ಹೇಳಿದಷ್ಟು ಖಚಿತವಾಗಿ ಈ ನರಾಗ್ರಗಳ ರಚನೆ ಇರುವುದೂ ನಿರ್ದಿಷ್ಟ ನರಾಗ್ರಗಳು ನಿರ್ದಿಷ್ಟ ಅರಿವನ್ನೇ ಯಾವಾಗಲೂ ಉಂಟುಮಾಡುವುದೂ ಸಂದೇಹಾಸ್ಪದ. 6 ಚ.ಸೆಂ. ಚರ್ಮಕ್ಷೇತ್ರದಲ್ಲಿ ಚರ್ಮ ಉಷ್ಣತೆ 250 ಅ  ಇದ್ದಾಗ 17 ತಂಡಿ ಬಿಂದುಗಳು (ಕೋಲ್ಡ್ ಸ್ಪಾಟ್ಸ್) ಇದ್ದುದನ್ನೂ ಅದೇ ಕ್ಷೇತ್ರದಲ್ಲಿ ಉಷ್ಣತೆ 330ಅ  ಆದಾಗ 93 ತಂಡಿ ಬಿಂದುಗಳು ಇದ್ದುದನ್ನೂ ಬಿಂಗ್ ಮತ್ತು ಸ್ಕೌಬಿ ಎಂಬವರು ಪ್ರಯೋಗದಿಂದ ತೋರಿಸಿದರು (1949). ನಿಜವಾಗಿ 17 ಬಿಂದುಗಳಿರುವುವೋ 93 ಬಿಂದುಗಳಿರುವುವೋ ಇಲ್ಲವೇ ಈ ಬಿಂದುಗಳಿರುವುದೇ ಸುಳ್ಳೋ ಎಂದು ಸಂದೇಹ ಬರುವುದು ಸಹಜವೇ. ಅಲ್ಲದೆ ಚರ್ಮದಲ್ಲಿ ಅಲ್ಲಲ್ಲಿ ಬಿಂದುಗಳಿಗೆ ಎಷ್ಟೇ ಅಧಿಕವಾದ ತಂಡಿ ತಟ್ಟಿದರೂ ಅದರ ಅರಿವೇ ಉಂಟಾಗುವುದಿಲ್ಲವೆಂಬುದೂ ವ್ಯಕ್ತಪಟ್ಟಿದೆ. ಇದೇ ಬಿಂದುವಿನಲ್ಲಿ ಬೇರೆ ಪ್ರಾಯಿಕಜ್ಞಾನ ಇರಬಹುದಾದ್ದರಿಂದ ಅಲ್ಲಿ ನರಾಗ್ರವಿರುವುದು ಖಚಿತವಾದರೂ ತಂಡಿಯ ಅರಿವಿಗೆ ಕಾರಣವಾದ ವಿಶಿಷ್ಟ ನರಾಗ್ರವಂತೂ ಇಲ್ಲವೆಂಬುದೂ ಅಷ್ಟೆ ಖಚಿತವಾಗುತ್ತದೆ. ಹೊರಕಿವಿ, ಉದರದ ಕೂದಲಿರುವ ಚರ್ಮದ ಭಾಗ, ಕೈಬೆರಳುಗಳ ಬೆನ್ನುಭಾಗ ಇವುಗಳಲ್ಲಿ ಸ್ಪರ್ಶ ಮತ್ತು ನೋವಿನ ಅರಿವುಗಳನ್ನು ಉಂಟುಮಾಡುವ ನರಾಗ್ರಗಳು ಮಾತ್ರವೇ ಇದ್ದರೂ ಈ ಸ್ಥಳಗಳಲ್ಲಿಯೂ ತಂಡಿ ಬಿಸಿಗಳ ಅರಿವು ಸಾಧ್ಯ. ಆದ್ದರಿಂದ ಇಂಥ ನರಾಗ್ರ ಇಂಥ ಅರಿವಿಗೇ ಕಾರಣ ಎಂದು ಖಚಿತವಾಗಿ ಹೇಳುವುದು ತಪ್ಪಾದೀತು. ಅಲ್ಲದೆ ಇನ್ನೂ ಕೆಲವು ವಿಷಯಗಳನ್ನು ಗಮನಿಸಬೇಕು. ಚರ್ಮದ ನರತಂತುಗಳು ಪೂರೈಕೆ ಆಗುವ ಕ್ಷೇತ್ರಗಳು ಅನಿರ್ದಿಷ್ಟ. ಒಂದು ನರತಂತುವಿನ ಕವಲುಗಳು ಅನೇಕ ಬಿಂದು ಕ್ಷೇತ್ರಗಳಿಂದ ಪ್ರಾರಂಭವಾಗಿ ಬೇರೆ ಬೇರೆ ನರತಂತುಗಳನ್ನು ಸೇರುವುದೂ ಕಂಡು ಬಂದಿದೆ. ಅಕ್ಕಪಕ್ಕ ಕ್ಷೇತ್ರಗಳ ಈ ರೀತಿಯ ಪರಸ್ಪರ ಅಧಿವ್ಯಾಪನೆಯಿಂದ (ಓವರ್‍ಲ್ಯಾಪಿಂಗ್) ಒಂಡೆರಡು ನರಗಳು ನಾಶವಾದರೆ ಯಾವ ನಿರ್ದಿಷ್ಟ ಕ್ಷೇತ್ರದ ಸಂವೇದನೆಯೂ ನಾಶವಾಗುವುದಿಲ್ಲ. ಚರ್ಮದಲ್ಲಿ ಸಂವೇದನಗಳ ಅರಿವಿನ ಸೂಕ್ಷ್ಮತೆ ವಿವಿಧ ಕ್ಷೇತ್ರಗಳಲ್ಲಿ ಬೇರೆ ಬೇರೆ. ಈ ವ್ಯತ್ಯಾಸಗಳಿಗೆ ಆಯಾ ಕ್ಷೇತ್ರಕ್ಕೆ ಪುರೈಕೆಯಾಗುವ ನರಗಳ ಸಂಖ್ಯೆಯ ವ್ಯತ್ಯಾಸ ಕಾರಣವೆಂದು ಹೇಳಲಾಗುವುದಿಲ್ಲ. ನರಗಳ ಸಂಖ್ಯೆ ಕಡಿಮೆ ಆದರೆ ಅವುಗಳಲ್ಲಿ ಬಹಳ ಕವಲುಗಳು ಇರುವುದರಿಂದ ಸಾಮಾನ್ಯವಾಗಿ ಎಲ್ಲ ಕ್ಷೇತ್ರಗಳಲ್ಲೂ ಹೆಚ್ಚುಕಡಿಮೆ ಸಮಾನ ಸಂಖ್ಯೆಯ ನರಾಗ್ರಗಳಿರುತ್ತವೆ. ಬಹುಶಃ ಸೂಕ್ಷ್ಮತೆ ಹೆಚ್ಚಾಗಿರುವ ಸ್ಥಳದಲ್ಲಿನ ನರಾಗ್ರಗಳಿಗೆ ವೈಯಕ್ತಿಕವಾಗಿ ಸೂಕ್ಷ್ಮ ಪ್ರಚೋದನ ಸಾಮರ್ಥ್ಯ ಇರುವುದೆಂದು ತೋರುತ್ತದೆ. ಮುಖದಲ್ಲಿ ಹೆಚ್ಚು ಗಾಯವಾದರೆ ಅತಿ ನೋವು ಉಂಟಾಗುವುದಲ್ಲದೆ ಜ್ಞಾನವೂ ತಪ್ಪಬಹುದು. ಆದರೆ ಮುಖದಂತೆ ಬಹುನರಗಳು ಪೂರೈಕೆ ಆಗುವ ಬೇರೆ ಕಡೆ ಅಷ್ಟೇ ಗಾಯ ಆದಾಗ ನೋವು ಇಷ್ಟು ತೀಕ್ಷ್ಣವಾಗಿರುವುದಿಲ್ಲ. ದೇಹದಲ್ಲೆಲ್ಲ ಬಹು ಹೆಚ್ಚಾಗಿ ನರಗಳ ಪೂರೈಕೆ ಆಗಿರುವ ಸ್ಥಳಗಳಲ್ಲಿ ಹೊರಪ್ರಜನನಾಂಗಗಳಾದ ಶಿಶ್ನಭಗಲಿಂಗಗಳೂ ಉಂಟು. ಆದರೆ ಈ ಸ್ಥಳದಲ್ಲಿ ಪ್ರತ್ಯೇಕ ಬಿಂದುಗಳ ಸ್ಪರ್ಶಸೂಕ್ಷ್ಮತೆಯಾಗಲಿ ಶೀತೋಷ್ಣಗಳ ಅರಿವಿನ ಸೂಕ್ಷ್ಮತೆಯಾಗಲಿ ಹೆಚ್ಚೇನಿಲ್ಲ. ಕೊಯ್ದ ಗಾಯದಿಂದ ಉಂಟಾಗುವ ನೋವು ಮಾತ್ರ ಬೇರೆ ಭಾಗದಲ್ಲಿ ಅಷ್ಟೇ ಗಾಯದಿಂದ ಉಂಟಾಗುವ ನೋವಿಗಿಂತಲೂ ಅಧಿಕವಾಗಿರುತ್ತದೆ. ಯಾವ ನರಾಗ್ರವಾದರೂ ಅತಿಯಾಗಿ ಪ್ರಚೋದಿಸಲ್ಪಟ್ಟಾಗ ನೋವುಂಟಾಗುವುದು. ಆದರೆ ಸ್ಪರ್ಶ ಶೀತೋಷ್ಣ ಒತ್ತಡ ಇವುಗಳ ಅರಿವನ್ನು ಉಂಟುಮಾಡುವ ನರಾಗ್ರಗಳ ಮಿತಿಮೀರಿದ ಪ್ರಚೋದನೆಯಿಂದಲೇ ಅನುಭವಕ್ಕೆ ಬರುವ ಸಂವೇದನೆ ನೋವು ಎನ್ನುವುದು ತಪ್ಪು. ಸ್ಪರ್ಶಕ್ಕೆ ಸಂಬಂಧಪಟ್ಟ ರೋಮಗಳನ್ನು ಎಷ್ಟೇ ವೇಗ ಪ್ರಮಾಣದಲ್ಲಿ ಅಲುಗಾಡಿಸಿದರೂ ಸ್ಪರ್ಶಾನುಭವವಾಗುವುದೇ ಹೊರತು ನೋವಾಗುವುದಿಲ್ಲ. ನೋವಿನ ಅರಿವಿಗೆಂದೇ ನರಾಗ್ರಗಳಿರುವುದು ನಿಸ್ಸಂದೇಹ. ವೇದನಾಶಾಮಕ ಔಷಧಿಗಳು(ಅನಾಲ್ಜೆಸಿಕ್ಸ್) ನೋವನ್ನು ಮಾತ್ರ ಅರಿವಿಗೆ ಬರದಂತೆ ತಡೆಯುತ್ತವೆ. ಆದರೆ ಸ್ಪರ್ಶಶಿತೋಷ್ಣಗಳ ಅರಿವು ಇಂಥ ಔಷಧಿಗಳಿಂದ ವ್ಯತ್ಯಾಸವಾಗುದಿಲ್ಲ. ಯಾವ ವಿಶಿಷ್ಟ ರಚನೆಯೂ ಇಲ್ಲದ ನಗ್ನನರಾಗ್ರಗಳು ನೋವಿನ ಅರಿವಿಗೆ ಕಾರಣವೆಂದು ಹೇಳಲಾಗಿದೆ. ಆದರೆ ಕಾರ್ನಿಯ ಎಂಬ ಕಣ್ಣಿನ ಗುಡ್ಡೆಯ ಪಾರಕ ಭಾಗದಲ್ಲಿ ಕೇವಲ ಇಂಥ ನರಾಗ್ರಗಳೇ ಇದ್ದರೂ ಸ್ಪರ್ಶ ಶೀತೋಷ್ಣಗಳ ಅರಿವೂ ಈ ಭಾಗದಲ್ಲಿ ಅನುಭವಕ್ಕೆ ಬರುವುದು ತಿಳಿದಿದೆ. ಈ ಎಲ್ಲ ವಿವರಣೆಗಳಿಂದಲೂ ಗ್ರಹಿಸಬೇಕಾದ್ದೇನೆಂದರೆ ಚರ್ಮದಿಂದ ಸ್ಪರ್ಶ ಶೀತೋಷ್ಣಗಳು ನೋವು ಎಂಬ ನಾಲ್ಕು ಬಗೆಯ ಸಂವೇದನೆಗಳ ಅರಿವುಂಟಾಗುತ್ತದೆ. ಆ ಅರಿವು ಉಂಟಾಗುವ ಬಿಂದುಕ್ಷೇತ್ರಗಳನ್ನು ಗುರುತಿಸಬಹುದು. ಆದರೆ ನಿರ್ದಿಷ್ಟ ನರಾಗ್ರಗಳಿರುವುವೆಂದೂ ಅವು ನಿರ್ದಿಷ್ಟರೀತಿಯಲ್ಲಿ ಕೆಲಸಮಾಡುವುವೆಂದೂ ಹೇಳುವಂತಿಲ್ಲ. ಬಹುಶಃ ಅನೇಕ ನರಾಗ್ರಗಳು ಏಕಕಾಲಿಕವಾಗಿ ಪ್ರಚೋದನೆಗೊಳ್ಳುತ್ತವೆ. ಹೀಗೆ ಪ್ರಚೋದನೆಗೊಳ್ಳುವ ವಿವಿಧ ರೀತಿಯ ನರಾಗ್ರಗಳು ಪ್ರತಿಸಲವೂ ಬೇರೆ ಬೇರೆ ಸಂಖ್ಯೆಯಲ್ಲಿ ಇರುವುದರಿಂದ ಆ ಕಾಲಕ್ಕೆ ತಕ್ಕಂಥ ಮಿಶ್ರಪ್ರಚೋದನೆ ಉಂಟಾಗುತ್ತದೆ. ಈ ಮಿಶ್ರಪ್ರಚೋದನೆ ಮಿದುಳಿನಲ್ಲಿ ಅರ್ಥವಿಸಲ್ಪಟ್ಟಾಗ ವಿಶಿಷ್ಟ ಸಂವೇದನೆಯ ಅರಿವಾಗುತ್ತದೆ.
ಸ್ವರ್ಶ: ಸ್ವರ್ಶದಿಂದ ವಸ್ತುಗಳ ಅಳತೆ ಆಕಾರಗಳು, ನಯ, ಒರಟು, ದೃಢತೆ ಇತ್ಯಾದಿಗಳು ತಿಳಿಯುತ್ತವೆ. ನಿರೀಕ್ಷಿಸಬಹುದಾದಂತೆಯೇ ಮೀಸ್ನರನ ಕಣಗಳು ಮತ್ತು ಮೆಕ್ಕೆಲನ ತಟ್ಟೆಗಳು ಹೆಚ್ಚಾಗಿರುವ ಕೈಬೆರಳ ತುದಿ, ತುಟಿ, ಸ್ತನಾಗ್ರಗಳು ಮತ್ತು ದೇಹದ ನೈಸರ್ಗಿಕ ದ್ವಾರಗಳು ಇಂಥ ಕಡೆಗಳಲ್ಲಿ ಸ್ಪರ್ಶ ಸೂಕ್ಷ್ಮತೆ ಹೆಚ್ಚಾಗಿರುತ್ತದೆ. ಅಂಗೈ. ಗಲ್ಲ, ಹಣೆ, ಕೈತೋಳಿನ ಒಳಭಾಗ ಇವುಗಳಲ್ಲಿ ಸ್ಪರ್ಶ ಸೂಕ್ಷ್ಮತೆ ಕಡಿಮೆ. ತೊಡೆಯ ಮಧ್ಯದ ಮುಂಭಾದಲ್ಲಿ ಸ್ವರ್ಶಾನುಭವ ಬಹುಮಂದ. ಕೂದಲಿನ ಬುಡದಲ್ಲಿ ನರಾಗ್ರಗಳು ಬುಟ್ಟಿಯಂತೆ ಹೆಣೆದುಕೊಂಡು ಕೂದಲು ಅತ್ಯಲ್ಪವಾಗಿ ಅಲುಗಿದರೂ ಗ್ರಹಿಸಬಲ್ಲವಾಗಿರುವುದರಿಂದಲೂ ಕೂದಲು ಸನ್ನೆಗೋಲಾಗಿ (ಲೀವರ್) ವರ್ತಿಸಬಹುದಾದ್ದರಿಂದಲೂ ಕೂದಲು ಹೆಚ್ಚಾಗಿರುವ ಸ್ಥಳಗಳಲ್ಲಿ ಸ್ಪರ್ಶಸೂಕ್ಷ್ಮತೆ ಹೆಚ್ಚಿನದಾಗಿರುತ್ತದೆ. ಕೆಳತೋಳಿನ (ಫೋರ್ ಆರಮ್) ಹೊರಭಾಗದಲ್ಲಿ ಈ ಕಾರಣದಿಂದಲೇ ಸ್ಪರ್ಶಜ್ಞಾನ ಸೂಕ್ಷ್ಮವಾಗಿರುವುದು. ಇಂಥ ಸ್ಥಳಗಳನ್ನು ಹತ್ತಿಯ ಎಳೆಯಲ್ಲಿ ಬಹು ಹಗುರವಾಗಿ ಸ್ಪರ್ಶಿಸಿದರೂ ವ್ಯಕ್ತಿ ಕಣ್ಣುಮುಚ್ಚಿಕೊಂಡಿದ್ದರೂ ಸ್ಪರ್ಶಿಸಿದ ಸ್ಥಳ ಇಂಥದೇ ಎಂದು ನಿರ್ದಿಷ್ಟವಾಗಿ ಹೇಳಬಹುದು. ಆದರೆ ಒಂದು ವೈಶಿಷ್ಟ್ಯವೇನೆಂದರೆ ಸ್ಪರ್ಶಕಣಗಳು ಶೀಘ್ರವಾಗಿ ಪ್ರಚೋದನೆಗೆ ಒಗ್ಗಿಕೊಂಡು ಸೂಕ್ಷ್ಮತೆಯನ್ನು ಕಳೆದುಕೊಳ್ಳುವುದು. ಇದರಿಂದ ನಾವು ಬಟ್ಟೆ ಧರಿಸಿದಮೇಲೆ ಅವುಗಳ ಕಾಯಂ ಸ್ಪರ್ಶ ನಮ್ಮ ಅರಿವಿಗೆ ಬರುವುದಿಲ್ಲ. ಆದರೆ ಹೀಗೆ ಒಗ್ಗಿಕೊಂಡು ಸೂಕ್ಷ್ಮತೆಯನ್ನು ಕಳೆದುಕೊಳ್ಳುವುದನ್ನು ಪೆಸಿನಿಯ ಕಣದಲ್ಲೂ ನೋಡಬಹುದಾಗಿದೆ. ಸ್ಪರ್ಶಿಸಿದ ಎರಡು ಬಿಂದುಗಳನ್ನು ಪ್ರತ್ಯೇಕವಾಗಿ ಗುರುತಿಸಬಲ್ಲ ತಾರತಮ್ಯ ಜ್ಞಾನ (ಡಿಸ್ಕ್ರಿಮಿನೇಷನ್) ನಾಲಿಗೆ ತುದಿಯಲ್ಲಿ ಬಹು ಹೆಚ್ಚಾಗಿದೆ. ಸ್ಪರ್ಶಿಸಿದ 3 ಬಿಂದುಗಳು ಇಲ್ಲಿ 1ಮಿ.ಮೀ. ಅಂತರದಲ್ಲಿದ್ದರೂ ತಿಳಿಯುವುದು ಬೆರಳು ತುದಿಗಳಲ್ಲಿ ಈ ಅಂತರ 2ಮಿ.ಮೀ. ಗಳಷ್ಟಿರುತ್ತದೆ. ಮೇಲ್ತೋಳು (ಆರಮ್) ತೊಡೆಗಳಲ್ಲಿ ಸ್ಪರ್ಶಿಸಿದ ಎರಡು ಬಿಂದುಗಳು 6-7ಸೆಂ.ಮೀ. ಅಂತರದೊಳಗೆ ಇದ್ದರೆ ಅವು ಬೇರೆ ಬೇರೆ ಎಂದು ಗುರುತಿಸುವುದಕ್ಕಾಗುವುದಿಲ್ಲ, ಸ್ವಾಭಾವಿಕವಾಗಿಯೇ ನರಗಳು ರೋಗಪೀಡಿತವಾದಾಗ ಸ್ಪರ್ಶತಾರತಮ್ಯ ನಾಶವಾಗುತ್ತದೆ. ಸ್ಪರ್ಶತಾರತಮ್ಯ ವಾನ್ ಫ್ರೇ ಎಂಬುವನ ರೋಮ ಸಂವೇದನಾ ಮಾಪಕ (ಹೇರ್ ಈಸ್ತೀಸಿಸಿಯೋಮೀಟರ್) ಎಂಬ ಸಲಕರಣೆಯಿಂದ ತಿಳಿಯಬಹುದು.

ಶೀತೋಷ್ಣಗಳ ಅರಿವು : ದೇಹೋಷ್ಣಗಿಂತ ಕಡಿಮೆ ಅಥವಾ ಹೆಚ್ಚು ಉಷ್ಣತೆ ಇರುವ ವಸ್ತುಗಳು ತಂಡಿ ಇಲ್ಲವೇ ಬಿಸಿಬಿಂದುಗಳಿರುವ ಚರ್ಮಭಾಗವನ್ನು ಸ್ಪರ್ಶಿಸಿದರೆ ಸ್ಪರ್ಶಜ್ಞಾನವಾಗುವುದು ಮಾತ್ರವಲ್ಲದೆ ಸ್ಪರ್ಶಿಸಿದ ವಸ್ತುವಿನ ಶೈತ್ಯ ಅಥವಾ ಉಷ್ಣಗುಣವೂ ಗೊತ್ತಾಗುತ್ತದೆ. ಸ್ತನಾಗ್ರಗಳು, ಎದೆ, ನಾಸಿಕ, ತೋಳಿನ ಮುಂಭಾಗ ಮತ್ತು ಉದರ-ಈ ಸ್ಥಳಗಳಲ್ಲಿ ಶೀತೋಷ್ಣಗಳ ಅರಿವು ಬಲು ಸೂಕ್ಷ್ಮ. ಬಿಸಿಲುಗಾಳಿಗೆ ಹೆಚ್ಚಾಗಿ ಒಡ್ಡಲ್ಪಡುವ ಮುಖ ಕೈಕಾಲುಗಳಲ್ಲಿ ಈ ಅರಿವು ಮಂದ. ಒಂದು ವಸ್ತು ಇನ್ನೊಂದು ವಸ್ತುವಿಗಿಂತ ತಣ್ಣಗಿರುವುದು ಅಥವಾ ಬಿಸಿಯಾಗಿರುವುದು 270 ಅ ನಿಂದ 320 ಅ ಉಷ್ಣತಾಮಿತಿಯಲ್ಲಿ ಬಹು ಸೂಕ್ಷ್ಮವಾಗಿ ಅರಿವಿಗೆ ಬರುತ್ತದೆ. ಈ ಮಿತಿಯಲ್ಲಿ 0.20 ಅ ಯಷ್ಟು ವ್ಯತ್ಯಾಸವೂ ಗೊತ್ತಾಗುವುದು. ಮಸ್ತುಗಳ ಉಷ್ಣತಾಮಟ್ಟ ಬಹು ಕಡಿಮೆ ಆಗಿದ್ದರೆ ಅಥವಾ ಬಹು ಹೆಚ್ಚಾಗಿದ್ದರೆ ಎರಡು ಪದಾರ್ಥಗಳ ಉಷ್ಣತಾ ಸ್ಥಿತಿಯಲ್ಲಿನ ವ್ಯತ್ಯಾಸ ಇಷ್ಟು ಸೂಕ್ಷ್ಮವಾಗಿ ಗೊತ್ತಾಗುವುದಿಲ್ಲ. ಸ್ಪರ್ಶ ಒತ್ತುವಿಕೆಗಳಿಗೆ ಒಗ್ಗಿಕೊಳ್ಳುವಂತೆ ಚರ್ಮ ಉಷ್ಣತೆಗೂ ಒಗ್ಗಿಕೊಳ್ಳುವುದೆಂಬುದನ್ನು ಒಂದು ಸುಲಭ ಪ್ರಯೋಗದಿಂದ ತೋರಿಸಬಹುದು. ಒಂದು ಬೋಗುಣಿಯಲ್ಲಿ ಬಿಸಿನೀರು. ಇನ್ನೊಂದರಲ್ಲಿ ತಣ್ಣೀರು, ಮೂರನೆಯದರಲ್ಲಿ ಉಗುರುಬೆಚ್ಚಗಿನ ನೀರು ತೆಗೆದುಕೊಳ್ಳುವುದು; ಒಂದು ಕೈಯನ್ನು ಬಿಸಿನೀರಿನಲ್ಲೂ ಇನ್ನೊಂದು ಕೈಯನ್ನು ತಣ್ಣೀರಿನಲ್ಲೂ ಸ್ವಲ್ಪ ಹೊತ್ತು ಇಟ್ಟು ಬಳಿಕ ಎರಡು ಕೈಗಳನ್ನು ಉಗುರುಬೆಚ್ಚಗಿನ ನೀರಿನಲ್ಲಿಡುವುದು; ಹೀಗೆ ಮಾಡಿದಾಗ ತಣ್ಣೀರಿನಲ್ಲಿದ್ದ ಕೈಗೆ ಬೆಚ್ಚಗಾದ ಅನುಭವವೂ ಬಿಸಿನೀರಿನಲ್ಲಿದ್ದ ಕೈಗೆ ತಣ್ಣಗಾದ ಅನುಭವವೂ ಉಂಟಾಗುತ್ತವೆ. ತಣ್ಣೀರಿನಲ್ಲಿ ಸ್ವಲ್ಪ ಹೊತ್ತು ಕೈ ಇಟ್ಟಿದ್ದು ತರುವಾಯ ಬಿಸಿ ನೀರಿನಲ್ಲಿ ಅದ್ದಿದರೆ ತತ್‍ಕ್ಷಣವೇ ಬಿಸಿಯ ಅನುಭವ ಉಂಟಾದರೂ ಆಮೇಲೆ ಕೆಲವು ಸೆಕೆಂಡುಗಳಲ್ಲಿ ಪುನಃ ತಣ್ಣಗಿರುವಂತೆಯೇ ಭಾಸವಾಗುವುದು. ತೂಕದ ಬಟ್ಟು ತಣ್ಣಗೆ ಕೊರೆಯುತ್ತಿದ್ದಾಗ ಅದೇ ತೂಕದ ಬಿಸಿಯಾದ ಬಟ್ಟಿಗಿಂತ ಭಾರವಾಗಿರುವಂತೆ ತೋರುತ್ತದೆ. ಮಂಜಿನ ಗೆಡ್ಡೆಯನ್ನು ಚರ್ಮಕ್ಕೆ ತಾಕಿಸಿದ್ದು ತೆಗೆದುಬಿಟ್ಟಮೇಲೂ ಕೆಲವು ಸೆಕೆಂಡುಗಳ ಕಾಲ ತಣ್ಣಗೆ ಕೊರೆಯುವ ಅನುಭವ ಮುಂದುವರಿಯುವುದು. ಇವಕ್ಕೆಲ್ಲ ಸರಿಯಾದ ಕಾರಣ ತಿಳಿದಿಲ್ಲ. ಮೆಂಥಾಲ್ ಎಂಬ ವಸ್ತುವಿರುವ ಶುಂಠಿ ಪೆಪ್ಪರ್‍ಮಿಂಟನ್ನು ತಿಂದು ಬಾಯಲ್ಲಿ ಉಸಿರಾಡಿದರೆ ತಣ್ಣಗಾಗುವುದು ಸಾಮಾನ್ಯವಾಗಿ ಎಲ್ಲರ ಅನುಭವ. ಬಹುಶಃ ಮೆಂಥಾಲ್ ನಾಲಿಗೆಯಲ್ಲಿ ತಂಡಿಯ ಅರಿವಿಗೆ ಕಾರಣವಾದ ನರಾಗ್ರದ ತಾರತಮ್ಯಜ್ಞಾನವನ್ನು ಅಧಿಕಗೊಳಿಸುವುದರಿಂದ ಸ್ವಾಭಾವಿಕವಾಗಿ ಉಸಿರಾಡುವ ವಾಯುವೂ ತಣ್ಣಗಿರುವಂತೆ ಅನಿಸುತ್ತದೆ. ತಂಪಾಗಿರುವಂತೆ ತೋರುವದು ಅಥವಾ ಬಿಸಿಯಾಗಿರುವಂತೆ ತೋರುವುದು ಸಾಮಾನ್ಯವಾಗಿ ಆ ಸ್ಥಳದಲ್ಲಿ ಚರ್ಮದ ಉಷ್ಣತೆ ಕಡಿಮೆಯಾಗುವುದರಿಂದ ಅಥವಾ ಹೆಚ್ಚಾಗುವುದರಿಂದ, ಪರಿಸರಕ್ಕೆ ಒಡ್ಡಿದ ಚರ್ಮ ತಣ್ಣಗಾಗುವುದರಿಂದ ಚಳಿಯೂ ಬಿಸಿಯಾಗುವುದರಿಂದ ಸೆಖೆಯೂ ಉಂಟಾಗುವುವು. ದೇಹೋಷ್ಣತೆ ಕಡಿಮೆ ಆಗುವುದರಿಂದ ಅಥವಾ ಹೆಚ್ಚಾಗುವುದರಿಂದ ಸಾಮಾನ್ಯವಾಗಿ ಇಂಥ ಅನುಭವ ಉಂಟಾಗುತ್ತದೆ. ಆದರೆ ಕೆಲವು ವೇಳೆ ಇದು ತಿರುಗುಮುರುಗಾಗುವುದುಂಟು. ಮದ್ಯಪಾನ ಮಾಡಿದವರಲ್ಲಿ ದೇಹೋಷ್ಣ ಅಧಿಕವಾಗಿ ಕಳೆದು ಹೋಗುತ್ತಿರುವುದರಿಂದ ಅವರ ದೇಹೋಷ್ಣತೆ ಸಹಜ ಮಟ್ಟಕ್ಕಿಂತ ಸ್ವಲ್ಪ ಕಡಿಮೆಯೇ ಇರುವುದು. ಆದರೆ ಅವರಿಗೆ ತಾವು ಬೆಚ್ಚಗಿದ್ದೇವೆಂಬ ಅನುಭವವೇ ಇರುತ್ತದೆ. ಬಹುಶಃ ಮದ್ಯಸಾರದಿಂದ ಚರ್ಮದ ಧಮನಿಗಳು ಹಿಗ್ಗಿ ಹೆಚ್ಚು ರಕ್ತಸಂಚಾರದಿಂದ ಚರ್ಮ ಶಾಖಗೊಳ್ಳುವುದರಿಂದ ಈ ಅನುಭವ ಉಂಟಾಗುವುದಾಗಿರಬಹುದು. ಆದರೆ ಮಲೇರಿಯ ಜ್ವರದಿಂದ ನರಳುತ್ತಿರುವವರ ಚರ್ಮ ಅಧಿಕ ಜ್ವರದಿಂದ ಸುಡುತ್ತಿದ್ದರೂ ಅವರಿಗೆ ತಡೆಯಲಾರದಷ್ಟು ಚಳಿಯಾಗುತ್ತಿರುವುದು. ಇವೆಲ್ಲವೂ ತೀತೋಷ್ಣಗಳ ಅರಿವು ಹೀಗೆ ಎಂದೂ ಎಲ್ಲರಲ್ಲೂ ಒಂದೇ ಎಂದು ಖಚಿತವಲ್ಲವೆಂಬುದನ್ನು ತೋರಿಸುತ್ತವೆ.

ನೋವು : ಈ ಅನುಭವ ಸ್ಪರ್ಶಶೀತೋಷ್ಣಗಳಿಗಿಂತ ಅನೇಕ ವಿಧಗಳಲ್ಲಿ ಭಿನ್ನವಾಗಿದೆ. ಸ್ಪರ್ಶಶೀತೋಷ್ಣಗಳು ಚರ್ಮದಿಂದ ಮಾತ್ರ ಅನುಭವಕ್ಕೆ ಬರುವ ಸಂವೇದನೆಗಳು. ಆದರೆ ನೋವು ಚರ್ಮದಲ್ಲಿಯೇ ಅಲ್ಲದೆ ದೇಹದ ಒಳ ಅಂಗಗಳಲ್ಲೂ ಉಂಟಾಗಬಹುದು. ಸ್ಪರ್ಶಶೀತೋಷ್ಣಗಳು ಸಂದರ್ಭಾನುಸಾರ ಹಿತಕರವಾಗಿರಬಹುದು ; ಇಲ್ಲವೇ ಅಹಿತಕರವಾಗಿರಬಹುದು. ಆದರೆ ನೋವು ಯಾವಾಗಲೂ ಅಹಿತಕರವೇ. ಸ್ಪರ್ಶಶೀತೋಷ್ಣಗಳಿಗೆ ವ್ಯಕ್ತಿ ಒಗಿಕೊಳ್ಳಬಹುದಾಗಿ ಸ್ವಲ್ಪ ಕಾಲಾನಂತರ ಇವು ಗಮನದಿಂದ ಅಳಿಸಿಹೋಗಬಹುದು. ಆದರೆ ನೋವು ಒಗ್ಗಿಕೊಳ್ಳುವ ಸಂವೇದನೆ ಅಲ್ಲವೇ ಅಲ್ಲ. ಮುಳ್ಳು ಚುಚ್ಚಿಕೊಂಡು ನೋಯುತ್ತಿದ್ದರೆ ಮುಳ್ಳು ಇರುವಷ್ಟು ಕಾಲವೂ ಬಿಡದೆ ನೋಯುತ್ತಿರುತ್ತದೆ. ಅನುಭವವಿಲ್ಲದುರುವವರಿಗೆ ನೋವಿನ ಸ್ವಭಾವವನ್ನು ವಿವಿರಿಸಿ ತಿಳಿಯಪಡಿಸುವುದು ಸಾಧ್ಯವಿಲ್ಲ. ಅಲ್ಲದೆ ವೈಯಕ್ತಿಕವಾಗಿ ನೋವಿನ ತೀವ್ರತೆ ಬೇರೆ ಬೇರೆ ಇರುವುದರಿಂದ ನೋವಿನ ಮಾಪನ ಸಾಧ್ಯವಿಲ್ಲ. ಆದರೂ ತತ್‍ಕ್ಷಣದಲ್ಲೆ ಮುದುರಿಕೊಳ್ಳುವ, ಬೆವರುವ, ರಕ್ತದ ಒತ್ತಡ ವ್ಯತ್ಯಾಸದ, ಗುಂಡಿಗೆಯ ಮಿಡಿತ ವೇಗ ವ್ಯತ್ಯಾಸದ ಪ್ರಮಾಣಗಳಿಂದ ನೋವಿನ ತೀವ್ರತೆಯನ್ನು ತಕ್ಕಮಟ್ಟಿಗೆ ಅಳೆಯಬಹುದು. ದೇಹಕ್ಕೆ ಘಾಸಿಯಾದಾಗ ಅಗತ್ಯವಾಗಿ ಕಂಡುಬರುವ ನೈಸರ್ಗಿಕ ರಕ್ಷಣ ಕ್ರಮದೊಂದಿಗೆ ಯಾವಾಗಲೂ ಜೊತೆಗೊಂಡಿರುವ ಮನಃಸ್ಥಿತಿಯೇ ನೋವು ಎಂದು ಶೆರಿಂಗ್‍ಟನ್ ಎಂಬ ವಿಜ್ಞಾನಿ ಅದರ ಲಕ್ಷಣನಿರೂಪಣೆಯನ್ನು ಮಾಡಿದ್ದಾನೆ. ರಕ್ಷಣಕ್ರಮ ನೋವಿನಿಂದ ಖಾತರಿಯಾಗಿ ಏರ್ಪಟ್ಟು ಘಾಸಿಯಾಗಬಹುದಾದ ಸನ್ನಿವೇಶಗಳಲ್ಲಿ ಆಗುವ ಅಪಾಯ ಸಾಧ್ಯವಾದಷ್ಟು ಮಿತಿಗೊಳಿಸಲ್ಪಡುತ್ತದೆ. ಸೂಜಿ ಚುಚ್ಚಿದಾಗ, ಬಿಸಿ ತಗುಲಿದಾಗ ನೋವು ಉಂಟಾಗಿ ತತ್‍ಕ್ಷಣವೇ ಆ ಭಾಗ ಅನೈಚ್ಛಿಕವಾಗಿ ಮುದುರಿಕೊಳ್ಳುವುದರಿಂದ (ವಿತ್‍ಡ್ರಾಯಲ್ ರಿಫ್ಲೆಕ್ಸ್) ಈ ಸಂದರ್ಭಗಳಲ್ಲಿ ಆಗಬಹುದಾದ ಗಾಯ ಮಿತಿಗೊಳಿಸಲ್ಪಡುತ್ತದೆ. ಗುಂಡಿಗೆಯ ರಕ್ತಪೂರೈಕೆ ತೃಪ್ತಿಕರವಾಗಿಲ್ಲದಿದ್ದಾಗ ಶ್ರಮಕೆಲಸಗಳಿಂದ ತೀವ್ರ ಎದೆನೋವು ಉಂಟಾಗುವುದು. ಈ ನೋವಿನಿಂದ ಇಂಥ ಕೆಲಸವನ್ನು ಮುಂದುವರಿಸಬಾರದು ಎನ್ನುವ ಅರಿವು ಹಾಗೂ ಪರಿಸ್ಥಿತಿ ಉಂಟಾಗುತ್ತವೆ. ಊತಗೊಂಡಾಗ ಉಂಟಾಗುವ ನೋವು ನಿಶ್ಚಲವಾಗಿರುವುದು ದೇಹಸೌಖ್ಯಕ್ಕೆ ಅನುಕೂಲವೆಂದು ಮನಗಾಣಿಸುತ್ತದೆ. ಆದರೂ ನೋವು ಇಂಥ ರಕ್ಷಣೆಯ ನಿಶ್ಚಯತೆಗೆ ಏರ್ಪಟ್ಟ ಸಂವೇದನೆ ಎಂದು ಹೇಳುವಂತಿಲ್ಲ. ಕೆಲವು ಏಡಿಗಂತಿಗಳಲ್ಲಿ ಚಿಕಿತ್ಸಾತೀತ ಮಟ್ಟ ಮುಟ್ಟುವವರೆಗೂ ನೋವೇ ಕಾಣಬರದೆ ಅಗಾಧ ಹಾನಿಯಾಗಬಹುದು. ಅಲ್ಲದೆ ಅನಂತರ ಕಾಣಬರುವ ತೀವ್ರ ಹಾಗೂ ನಿರಂತರ ನೋವು ರೋಗಿಗೆ ಯಾವ ಅನುಕೂಲತೆಗೋಸ್ಕರ ಏರ್ಪಟ್ಟಿದೆ ಎಂದೂ ಅರ್ಥವಾಗುವಂತಿಲ್ಲ. ನೋವಿನಿಂದ ಉಂಟಾಗುವ ಮಾನಸಿಕ ಸೌಖ್ಯ ನಾಶ ಹಾಗೂ ರಕ್ತ ಪರಿಚಲನೆ ಮತ್ತು ಶ್ವಾಸಕ್ರಮಗಳ ಏರುಪೇರುಗಳು ಆರೋಗ್ಯಸ್ಥಿತಿಗೆ ಪ್ರತಿಕೂಲಿಗಳಾಗಿರುತ್ತವೆ.

ಗುಂಡಿಗೆ ಸ್ನಾಯುಗಳಲ್ಲಿ ಆಕ್ಸಿಜನ್ನಿನ ಕೊರತೆಯಿಂದ ಉಂಟಾಗುವ ನೋವು, ಟೊಳ್ಳು ಅಂಗಗಳಿಂದ ಉಂಟಾಗುವ ಶೂಲೆ ಮತ್ತು ಚರ್ಮದ ಅಡಿ ಊತಕಗಳಿಂದ ಉಂಟಾಗುವ ನಿರಂತರ ಯಾತನೆಗಳು ಚರ್ಮದ ಅರಿವಿಗೆ ಬರುವ ನೋವಿಗಿಂತ ತೀರ ಭಿನ್ನವಾದವು. ಚರ್ಮದಿಂದ ಅನುಭವವಾಗುವ ನೋವನ್ನು ಚುಚ್ಚಿದಂತೆ, ಕತ್ತರಿಸಿದಂತೆ, ಜಜ್ಜಿದಂತೆ ಇತ್ಯಾದಿ ಎಂದೂ ವರ್ಣಿಸಲಾಗಿದೆ. ಅಲ್ಲದೆ ತುಡಿತ, ಉರಿ, ಹೆಚ್ಚುಕಡಿಮೆ ಆಗುತ್ತಿರುವ ನೋವು ಏರಿಳಿತವಿಲ್ಲದ ನಿರಂತರ ಯಾತನೆ, ಮೂಗುನೋವು, ಕಿವಿನೋವು ಇವನ್ನು ಗುರುತಿಸಬಹುದು. ನೋವನ್ನು ತಿಳಿಸುವ ನರಾಗ್ರಗಳು ಉಷ್ಣವನ್ನು ತಿಳಿಸುವ ನರಾಗ್ರಗಳು ಎರಡೂ ಏಕಕಾಲಿಕವಾಗಿ ಪ್ರಚೋದನೆಗೊಳ್ಳುವುದರಿಂದ ಉರಿನೋವು (ಬರ್ನಿಂಗ್ ಪೆಯ್ನ್) ಉಂಟಾಗುತ್ತದೆ. ಗಾಯದಿಂದ ಊತ ಉಂಟಾಗಿ ಸ್ಥಳೀಯವಾಗಿ ಧಮನಿಗಳು ಹಿಗ್ಗಿ ರಕ್ತಪರಿಚಲನೆಯೂ ಸ್ಥಳೀಯವಾಗಿ ಹೆಚ್ಚುವುದರಿಮದ ಅಲ್ಲಿ ನಾಡಿಮಿಡಿತ ಕಂಡುಬರುತ್ತದೆ. ಪ್ರತಿಯೊಂದು ನಾಡಿಮಿಡಿತದೊಡನೆ ರಕ್ತಾಧಿಕ್ಯವಾಗಿ ಗಾಯಗೊಂಡ ಭಾಗ ಹಿಗ್ಗಿಸಲ್ಪಡುವುದರಿಂದ ಅಲ್ಲಿರುವ ಸ್ಪರ್ಶಕಣಗಳೂ ಉದ್ರೇಕಗೊಂಡು ಅಂಥ ಪ್ರತಿಯೊಂದು ಸಮಯದಲ್ಲೂ ನೋವು ಹೆಚ್ಚಾಗುವಂತೆ ತೋರುತ್ತದೆ. ಇದೇ ತುಡಿತ. ಬಹುಶಃ ನೋವಿನ ನರಾಗ್ರಗಳ ಸೂಕ್ಷ್ಮತೆಯೂ ಇಂಥ ಸಂದರ್ಭಗಳಲ್ಲಿ ಅಧಿಕಗೊಂಡಿರುತ್ತದೆ.

ಸೂಜಿಯಿಂದ ಚರ್ಮವನ್ನು ಚುಚ್ಚಿದರೆ ಅದರ ಮೊನೆ ಚರ್ಮದೊಳಕ್ಕೆ ಹೋಗುವವರೆಗೂ ನೋವಾಗುವುದಿಲ್ಲ. ಅನಂತರ ತತ್‍ಕ್ಷಣದ ಚುಚ್ಚುನೋವಿನ ಅನುಭವವಾಗುತ್ತದೆ. ಇದು ಅಷ್ಟಾಗಿ ನೋವು ಎಂದು ಹೇಳುವಂತಿರುವುದಿಲ್ಲ. ಆದರೆ ಚುಚ್ಚಿದ ಅರಿವು ಉಂಟಾಗುತ್ತದೆ. ಕೆಲವು ಕ್ಷಣಗಳಾದ ಬಳಿಕ ನಿಧಾನವಾಗಿ ಪ್ರತ್ಯಕ್ಷ ನೋವಿನ ಅರಿವು ಉಂಟಾಗುವುದು. ಕಾಲಮೇಲೆ ಚುಚ್ಚಿದರೆ ತತ್‍ಕ್ಷಣದ ವೇಗಯಾತನೆಗೂ (ಫಾಸ್ಟ್ ಪೆಯ್ಸ್) ಅನಂತರದ ನಿಧಾನ ಯಾತನೆಗೂ (ಸ್ಲೋ ಪೆಯ್ನ್) ಇರುವಷ್ಟು ಕಾಲಾಂತರ ಕೈಮೇಲೆ ಅಥವಾ ಮುಖದ ಮೇಲೆ ಚುಚ್ಚಿದರೆ ಇರುವುದಿಲ್ಲ. ಕೊಕೇನ್ ಚುಚ್ಚುಮದ್ದು ಮಾಡಿ ಅನಂತರ ಸೂಜಿಯಿಂದ ಚುಚ್ಚಿದರೆ ವೇಗಯಾತನೆ ಕಾಣಬರುವುದಿಲ್ಲ. ಆದರೆ ನಿಧಾನಯಾತನೆ ತೀವ್ರವಾಗಿಯೂ ಬಹುಕಾಲಿಕವಾಗಿಯೂ ಇರುತ್ತದೆ. ವಿಕಿರಣ ಅಥವಾ ವಿಸರಿತ ಉಷ್ಣ (ರೇಡಿಯಂಟ್ ಹೀಟ್) ಚರ್ಮಕ್ಕೆ ತಾಗಿದರೆ ಮೊದಲು ಚುರುಕ್ ಎಂಬ ನೋವು ಆ ಕ್ಷಣದಲ್ಲಿ ಮಾತ್ರ ಅನುಭವವಾಗಿ ಅನಂತರ ನಿಧಾನವಾಗಿ ಉರಿ ಪ್ರಾರಂಭವಾಗುತ್ತದೆ. ಕೊಕೇನ್ ಉಪಯೋಗದಿಂದ ಈ ಉರಿಯ ಅನುಭವ ಆಗಲಾರದ್ದರಿಂದ ವಿಸರಿತ ಉಷ್ಣದಿಂದ ಚರ್ಮವನ್ನು ಸುಟ್ಟು ಹಾಕಬಹುದು. ಒಂದು ಸ್ಥಳದ ನೋವು ಇನ್ನೊಂದು ಸ್ಥಳದಲ್ಲಿ ಅದಕ್ಕಿಂತ ತೀವ್ರವಾದ ನೋವು ಉಂಟಾದಾಗ ಲಕ್ಷ್ಯದಿಂದ ತಪ್ಪಿಹೋಗುತ್ತದೆ. ನೋವಾದಾಗ ಭದ್ರವಾಗಿ ತುಟಿ ಕಚ್ಚಿಕೊಳ್ಳುವುದೂ ಬಿಗಿಯಾಗಿ ಕೈಕೈಹಿಸಿಕಿಕೊಂಡು ಮುಷ್ಟಿ ಬಿಗಿದುಕೊಳ್ಳುವುದೂ ಈ ಕಾರಣಕ್ಕಾಗಿ, ನೋವು ಶಮನಕ್ಕೆ ಪ್ರತಿನೋವಿನ (ಕೌಂಟರ್ ಇರಿಟೇಶನ್) ಗುಟ್ಟು ಇದೇ.

ನರಗಳ ಭೌತ ಅಥವಾ ರಾಸಾಯನಿಕ ಪ್ರಚೋದನೆಗಳಿಂದ ನೋವು ಉಂಟಾಗುತ್ತದೆ. ಭೌತವಾಗಿ ಅಗಾಧ ಉಷ್ಣಶೀತಗಳನ್ನು ಉಂಟುಮಾಡುವಿಕೆ, ವಿದ್ಯುತ್ಪ್ರಚೋದನೆ, ವಸ್ತುಗಳ ಘರ್ಷಣೆ ಇವುಗಳಿಂದ ಆಗುವ ಗಾಯದಿಂದ ನೋವು ಉಂಟಾಗುತ್ತದೆ. ಮೊಣಕಾಲಿನ ಮೇಲೆಯೋ ತಲೆಯ ಮೇಲೆಯೋ ಏಟು ಬಿದ್ದಾಗ ಇಲ್ಲವೆ ಕೂದಲನ್ನು ಎಳೆದು ಚರ್ಮವನ್ನು ಹಿಗ್ಗಿಸಿದಾಗ ನೋವು ಉಂಟಾಗುತ್ತದೆ. ಸೂಜಿಯಿಂದ ಚುಚ್ಚಿದಾಗ ಉಂಟಾಗುವ ಕ್ಷಣಿಕ ನೋವಿನ ಸಂದರ್ಭದಲ್ಲಿ ನೋವಿಗೆ ರಾಸಾಯನಿಕ ಕಾರಣಗಳು ಇರುತ್ತವೋ ಇಲ್ಲವೋ ಖಿಚಿತವಾಗಿಲ್ಲ. ಆದರೆ ಬಾಸುಂಡಿ ಬರಿಸುವ ಬಿರುಸಾದ ಏಟು, ಬೊಬ್ಬೆ ಬರಿಸುವಂಥ ಸುಡುಗಾಯ ಇಂಥ ಕ್ಷಣಿಕವಾಗಲ್ಲದೆ ಬಹುಕಾಲಿಕವಾಗಿಯೂ ನೋವು ಇರುವ ಸಂದರ್ಭಗಳಲ್ಲಿ ಬಹುಕಾಲಿಕವಾದ ನೋವಿಗಂತೂ ರಾಸಾಯನಿಕಗಳು ಕಾರಣವೆಂದು ನಂಬಲಾಗಿದೆ. ಎಕ್ಸ್‍ಕಿರಣ ಮತ್ತು ಅತಿನೇರಿಳೆ ಕಿರಣಗಳಿಂದ ಉಂಟಾದ ಸುಟ್ಟಗಾಯಗಳಲ್ಲಿ ಕಿರಣಗಳು ತಾಕಿದ ಕ್ಷಣದಲ್ಲಿ ನೋವಿನ ಅರಿವು ಉಂಟಾಗದಿದ್ದರೆ ಸ್ವಲ್ಪ ಕಾಲ ಕಳದೆ ಮೇಲೆ ದೀರ್ಘಕಾಲಿನ ನೋವು ಉಂಟಾಗುವುದು. ಆ ಕಿರಣಗಳಿಂದ ಚರ್ಮದ ಅಡಿ ಊತಕಗಳಲ್ಲಿ ಬಿಡುಗಡೆ ಮಾಡಲ್ಪಟ್ಟ ರಾಸಾಯನಿಕಗಳೇ ಇದಕ್ಕೂ ಕಾರಣ. ಶಕ್ತಿಯುತ ಆಮ್ಲಗಳು, ಕ್ಷಾರಗಳು ಹಾಗೂ ಕ್ಲೋರೋಫಾರಮ್ ಇವು ಚರ್ಮಕ್ಕೆ ಸೋಕಿದರೂ ನೋವು ಉಂಟಾಗುತ್ತದೆ. ಚರ್ಮವನ್ನು ಇವು ನಾಶಪಡಿಸುವುದೇ ಇದರ ಕಾರಣ. ಶರೀರ ದ್ರವದ (ಬಾಡಿ ಫ್ಲೂಯಿಡ್) ಲವಣಾಂಶಕ್ಕಿಂತ ಬಹುಕಡಿಮೆ ಅಥವಾ ಹೆಚ್ಚು ಲವಣಾಂಶವಿರುವ ದ್ರವವನ್ನು ಆರ್ಸೆನಿಕ್ ಮತ್ತು ಪಾದರಸದ ಆಗ್ರ್ಯಾನಿಕ್ ಸಂಯುಕ್ತಗಳನ್ನು ಚುಚ್ಚುಮದ್ದಿನ ರೀತಿ ಚರ್ಮದೊಳಕ್ಕೆ ಕೊಟ್ಟು ನೋವಾಗುತ್ತದೆ. ತುರುಚೆ, ನಸುಗುನ್ನಿಯಂಥ ಸಸ್ಯಗಳ ಹಾಗೂ ಕಂಬಳಿ ಹುಳುವಿನ ಸ್ಪರ್ಶ, ಜೇನು ಕಣಜ ಚೇಳುಗಳ ವಿಷ ಇವು ನೋವನ್ನು ಉಂಟುಮಾಡುತ್ತವೆ. ಆದರೆ ಚರ್ಮದಲ್ಲೇ ಉತ್ಪತ್ತಿಯಾಗುವ ಅಥವಾ ಬಿಡುಗಡೆಯಾಗುವ ರಾಸಾಯನಿಕಗಳು ಮುಖ್ಯ-ಚರ್ಮದಲ್ಲಿ ಒಂದು ಬೊಬ್ಬೆಯನ್ನು ಉಂಟುಮಾಡಿ ಅದನ್ನು ಒಡೆದು ಹಸಿಗಾಯದ ಮೇಲೆ ರಾಸಾಯನಿಕಗಳನ್ನು ಸೋಕಿಸಿ ಅವು ನೋವನ್ನು ಉಂಟುಮಾಡಬಲ್ಲವೇ ಎಂದು ಪರೀಕ್ಷಿಸಲಾಗಿದೆ. ಆಗ 1ಮಿ.ಲೀ.ನಲ್ಲಿ 10 ಮೈಕ್ರೋಗ್ರಾಮಿಗೆ ಮೇಲ್ಪಟ್ಟು ಅಸಿಟೈಲ್‍ಕೋಲಿನ್, 10 ಮೈಕ್ರೋಗ್ರಾಮಿಗೆ ಮೇಲ್ಪಟ್ಟು ಹಿಸ್ಟಮಿನ್, 0.1 ಮೈಕ್ರೋಗ್ರಾಮಿಗೆ ಮೇಲ್ಪಟ್ಟು ಸೀರೋಟೋನಿನ್, 3 ಮಿಲಿಗ್ರಾಮಿಗೆ ಕಡಿಮೆ ಇಲ್ಲದೆ ಅಥವಾ 30 ಮಿಲಿಗ್ರಾಮಿಗೆ ಹೆಚ್ಚಾಗಿ ಸೋಡಿಯಮ್ ಕ್ಲೋರೈಡ್, 100 ಮಿಲಿಗ್ರಾಮಿಗೆ ಹೆಚ್ಚಾಗಿ ಪೊಟ್ಯಾಸಿಯಮ್ ಕ್ಲೋರೈಡ್ ಇರುವ ದ್ರವಗಳು ನೋವನ್ನು ಉಂಟುಮಾಡುವುದೆಂದು ಕಂಡುಬಂದಿದೆ. ಅಲ್ಲದೆ ಬೊಬ್ಬೆಯೊಳಗಿನ ದ್ರವ, ಊತಗಾಯಗಳ ಸ್ರಾವ, ಪ್ಲಾಸ್ಮ ಇವನ್ನು ಗಾಜಿನ ಪಾತ್ರೆಯೊಳಗಿಟ್ಟಿದ್ದರೆ ಅವೂ ವೇದನಾಕಾರಕಗಳಾಗುತ್ತವೆ. ಬಹುಶಃ ಈ ಸಂದರ್ಭದಲ್ಲಿ ವೇದನಾಕಾರಿ ವಸ್ತುಗಳ ಗಾಜಿನ ಸಂಪರ್ಕದಿಂದ ಪ್ರಾರಂಭಗೊಂಡ ರಾಸಾಯನಿಕ ಕ್ರಿಯೆಗಳಿಂದ ತಮ್ಮ ಮಾತೃರಾಸಾಯನಿಕಗಳಿಂದ (ಮದರ್ ಸಬ್‍ಸ್ಟೆನ್ಸಸ್) ಉತ್ಪತ್ತಿಯಾಗುತ್ತವೆ. ಪ್ಲಾಸ್ಮಾಕೈನಿನುಗಳೆಂಬ ಈ ವಸ್ತುಗಳನ್ನು ಬ್ರಾಡಿಕೈನಿನ್, ಲೆವಿಸ್ಸಿನ P ಎಂಬ ವಸ್ತು ಇತ್ಯಾದಿಗಳಾಗಿ ಗುರುತಿಸಿದ್ದಾರೆ. ಗಾಯಗೊಂಡಾಗ ಸ್ರವಿಸಿದ ರಕ್ತದಿಂದ ಇವು ಉತ್ಪತ್ತಿಯಾಗುವುವಲ್ಲದೆ ರಕ್ತಕಣಗಳು ಛಿದ್ರಿಸುವುದರಿಂದ ಹಿಸ್ಟಮಿನ್ ಮತ್ತು ಸೀರೋಟೋನಿನುಗಳೂ ಬಿಡುಗಡೆ ಆಗುತ್ತವೆ. ಇವೆಲ್ಲವೂ ಸೇರಿ ನೋವನ್ನು ಉಂಟುಮಾಡುವುವು. ನಸುಗುನ್ನಿ ತುರುಚೆ ವಗೈರೆಗಳಲ್ಲಿರುವ ವೇದನಾಕಾರಿಗಳಲ್ಲಿ ತಕ್ಕಷ್ಟು ಅಸಿಟೈಲ್ ಕೋಲಿನ್, ಹಿಸ್ಟಮಿನ್ ಮತ್ತು ಸೀರೋಟೋನಿನುಗಳು ಇರತ್ತವೆ. ಕಣದ ವಿಷದಲ್ಲಿ ಅಧಿಕವಾಗಿ ಹಿಸ್ಟಮಿನ್ ಸೀರೋಟೋನಿನುಗಳೂ ಪ್ಲಾಸ್ಮಾಕೈನಿನ್ನಿನಂಥ ವಸ್ತುವೂ ಇರುವುದು ಕಂಡುಬಂದಿದೆ. ವಾಸ್ತವವಾಗಿ ಹಿಸ್ಟಮಿನ್, ಸೀರೋಟೋನಿನ್ ಪ್ಲಾಸ್ಮಾಕೈನಿನುಗಳ ಮಿಶ್ರಣ ಅತ್ಯಂತ ತೀಕ್ಷ್ಣವಾದ ವೇದನಾಕಾರಕ.
ಚರ್ಮದಲ್ಲಿ ಅರಿವಾಗುವ ನೋವು ಸ್ಥಳೀಯ ಕಾರಣಗಳಿಂದಲ್ಲದೆ ಗಮನ ಸೆಳೆಯುವ ನೋವು ಕೂಡ (ರೆಫರ್ಡ್ ಪೆಯ್ನ್) ಆಗಿರಬಹುದು. ಗಮನ ಸೆಳೆಯುವ ನೋವು ವಾಸ್ತವವಾಗಿ ದೇಹದ ಒಳ ಅಂಗದ ಘಾತದಿಂದ ಉಂಟಾಗಿ ಭ್ರೂಣಾವಸ್ಥೆಯಲ್ಲಿ ಆ ಅಂಗಕ್ಕೆ ಸಂಬಂಧಪಟ್ಟಿರುವ ಚರ್ಮ ಕ್ಷೇತ್ರದಲ್ಲಿ (ಡರ್ಮಟೋಮ್) ಕಾಣಿಸಿಕೊಳ್ಳುವುದರಿಂದ ಅದಕ್ಕೆ ಈ ಹೆಸರಿದೆ. (ಗಮನ ಸೆಳೆಯುವ ನೋವು ಉಂಟಾದ ಸ್ಥಳದಲ್ಲಿ ಪ್ರತಿವೇದನೆಯನ್ನು ಉಂಟುಮಾಡಿದರೆ ಮೂಲ ನೋವು ಶಮನವಾಗುವುದು ಕಂಡುಬಂದಿದೆ.) ಸಾಮಾನ್ಯವಾಗಿ ನೋವನ್ನು ಉಂಟುಮಾಡದ ಪ್ರಚೋದನೆಗಳು ನೋವನ್ನು ಉಂಟುಮಾಡುವ ಇಲ್ಲವೆ ಸಾಮಾನ್ಯ ವೇದನಾಕಾರಿಗಳು ಅತೀವವಾಗಿ ನೋವನ್ನು ಉಂಟುಮಾಡುವ ಸಂದರ್ಭಕ್ಕೆ ಅತೀವ ಸಂವೇದನೆ (ಹೈಪರ್ ಆಲ್ಜೀಸಿಯ) ಎಂದು ಹೆಸರು. ಗಾಯದಿಂದ ಊತ ಉಂಟಾಗಿ ಊದಿಕೊಂಡಿರುವ ಸ್ಥಳದಲ್ಲಿ ಕೆಲವು ವೇಳೆ ಅದರ ಸುತ್ತಲೂ ಇಂಥ ಸಂವೇದನೆ ಇರುತ್ತದೆ.

ಕಡಿತ : ಇದನ್ನು ನವೆ, ತಿನಸು ಎಂದೂ ಧಾರವಾಡದ ಕಡೆ ತಿಂಡಿ ಎಂದೂ ಕರೆಯುತ್ತಾರೆ (ಇಚ್). ಬಹುಶಃ ಇದೇ ಪ್ರತ್ಯೇಕವಾದ ಸಂವೇದನೆ. ಹೊರತ್ವಚವನ್ನು ತೆಗೆದು ಹಾಕಿದರೆ ಬೇರೆ ಸಂವೇದನೆಗಳು ಇರಬಹುದಾದರೂ ಕಡಿತವಿರುವುದಿಲ್ಲ. ಕಡಿತವೂ ನೋವೂ ಸ್ವಲ್ಪಮಟ್ಟಿಗೆ ಪರಸ್ಪರ ಹೋಲುತ್ತವೆ. ಮಿದುಳುಬಳ್ಳಿಯಲ್ಲಿ ನೋವಿನ ನರತಂತುಗಳನ್ನು ಕತ್ತರಿಸಿದರೆ ನೋವಿನೊಡನೆ ಕಡಿತವೂ ಸಾಮಾನ್ಯವಾಗಿ ನಾಶವಾಗುತ್ತದೆ. ಅಲ್ಪ ವಿದ್ಯುತ್ಪ್ರಚೋದನೆ, ಅಲ್ಪ ಉಷ್ಣ ಇವುಗಳಿಂದ ಕಡಿತವನ್ನೂ ಅತ್ಯಧಿಕ ಪ್ರಚೋದನೆಯಿಂದ ನೋವನ್ನೂ ಉಂಟುಮಾಡಬಹುದು. ಕಡಿತ ಏಕಕಾಲಿಕವಾಗಿ ನೋವು ಮತ್ತು ಸ್ಪರ್ಶಗಳ ಸಂವೇದನೆ ಉಂಟಾಗುವುದರಿಂದ ಎಂಬ ಅಭಿಪ್ರಾಯವೂ ಇದೆ. ಆದರೆ ಕೆಲವು ವಿಷಯಗಳನ್ನು ಗಮನಿಸಬಹುದು. ಕಡಿಯುವ ಸ್ಥಳವನ್ನು ಬಹಿರಂಗಿಸಿ ಕಡಿತವನ್ನು ಶಮನಮಾಡಿಕೊಳ್ಳಲು ಕೆರೆದುಕೊಳ್ಳಲಾಗುತ್ತದೆ. ನೋಯುವ ಸ್ಥಳವನ್ನು ಹುದುಗಿಸಿ ರಕ್ಷಿಸಬೇಕೆನ್ನಿಸುವುದು. ಕೆರೆದರೆ ನೋವು ಜಾಸ್ತಿಯಾದರೆ ಉಗುರುಬೆಚ್ಚಗಿನ ಶಾಖದಿಂದ ಅದು ಶಮನವಾಗುತ್ತದೆ. ನೋವು ಅದರಲ್ಲೂ ಉರಿನೋವು ಶಾಖದಿಂದ ಅಧಿಕವಾಗುತ್ತದೆ. ಮಾರ್ಫಿನ್ ಚುಚ್ಚುಮದ್ದಿನಿಂದ ನೋವು ಕಡಿಮೆ ಆಗುತ್ತದೆ; ಆದರೆ ಕಡಿತ ಹೆಚ್ಚುತ್ತದೆ. ಹಿಸ್ಟಮಿನ್ ನಸುಗುನ್ನಿ ಇತ್ಯಾದಿಗಳು ಮೊದಲು ಉಂಟು ಮಾಡುವುದು ಕಡಿತ, ಅನಂತರ ಉರಿನೋವು. ಪ್ರಚೋದನೆ ಕಡಿಮೆಯಾಗಿದ್ದರೆ ಬರೀ ಕಡಿತದಲ್ಲೆ ಪರ್ಯವಸಾನವಾಗಬಹುದು. ಮಿದುಳು ಬಳ್ಳಿಯಲ್ಲಿ ನೋವಿನ ನರಗಳನ್ನು ಛಿದ್ರಿಸಿದರೆ ಹಿಸ್ಟಮಿನ್ನಿನಿಂದ ನೋವಾಗುವುದು ತಪ್ಪುತ್ತದೆ. ಆದರೆ ಕಡಿತವಿದ್ದೇ ಇರುತ್ತದೆ. ಇವೆಲ್ಲವುಗಳಿಂದ ಕಡಿತ ಪ್ರತ್ಯೇಕ ಸಂವೇದನೆಯೋ ನೋವು ಸ್ಪರ್ಶಗಳ ಮಿಶ್ರಿತ ಸಂವೇದನೆಯೋ ಎಂದು ಗೊತ್ತಾಗುವಂತಿಲ್ಲ. (ಕಾಮಾಲೆ, ಮಧುಮೂತ್ರ ಮುಂತಾದ ರೋಗಗಳಲ್ಲಿ ಅವ್ಯಕ್ತ ಕಾರಣಗಳಿಂದ ಕಡಿತ ಉಂಟಾಗಬಹುದು.)

ಕಚಗುಳಿ : ಬಹು ಹಗುರವಾಗಿ ಸ್ಪರ್ಶಿಸುವ ವಸ್ತು ದೇಹದ ಮೇಲೆ ಚಲಿಸಿದಾಗ ಇಲ್ಲವೇ ಚಲಿಸಲ್ಪಟ್ಟಾಗ ಉಂಟಾಗುವ ಸಂವೇದನೆ. ಇದರ ಅರಿವನ್ನು ಉಂಟುಮಾಡುವ ನರಗಳೂ ಕಡಿತದ ನರಗಳಂತೆಯೇ ನೋವು ನರಗಳ ಜೊತೆಯೇ ಕ್ರಮಿಸಿ ಮಿದುಳನ್ನು ತಲಪುತ್ತವೆ. ಕಡಿತದಂತೆಯೇ ಕಚುಗುಳಿ ಆದಾಗಲೂ ಕೆರೆದುಕೊಳ್ಳಬೇಕೆನ್ನಿಸುತ್ತದೆ. (ಬಹುಶಃ ಕಡಿತದಂತೆಯೇ ಕಚಗುಳಿಯೂ ಸ್ವರ್ಶನೋವುಗಳ ಸಂಯುಕ್ತ ಸಂವೇದನೆ ಎಂದು ಕಾಣಿಸುತ್ತದೆ.) ಮಿದುಳು ಬಳ್ಳಿಯಲ್ಲಿ ನೋವಿನ ನರಗಳನ್ನು ಕಡಿದರೆ ಕಚಗುಳಿ ಉಂಟಾಗುವುದು ನಿಂತುಹೋಗುತ್ತದೆ. ಹಾಗೇ ಚರ್ಮಕ್ಕೆ ಪೂರೈಕೆಯಾಗುವ ರಕ್ತವನ್ನು ಪ್ರಾಯೋಗಿಕವಾಗಿ ಕಡಿಮೆ ಮಾಡಿದರೆ ಸ್ಪರ್ಶಜ್ಞಾನ ಮಂದವಾಗಿ ಕಚಗುಳಿ ಉಂಟಾಗುವುದೂ ಲೋಪವಾಗುತ್ತದೆ. ಆದರೆ ನೋವು ಇದರಿಂದ ಮಾರ್ಪಾಡಾಗುವುದಿಲ್ಲ. 

ನೋವಿನ ಸಂವೇದನಾ ಲೋಪಸ್ಥಿತಿ (ಅನಾಲ್ಜೆಸಿಯ) : ಇದು ಅಪರೂಪವಾಗಿ ಆಜನ್ಮವಾಗಿ ಕಂಡು ಬರುವ ಸ್ಥಿತಿ. ಇದರಿಂದ ವ್ಯಕ್ತಿಯ ಆರೋಗ್ಯಕ್ಕೆ ಸಾಮಾನ್ಯವಾಗಿ ಕುಂದಿರುವುದಿಲ್ಲ. ಇಂಥ ಒಬ್ಬ ವ್ಯಕ್ತಿಯಲ್ಲಿ ಚರ್ಮವನ್ನು ಚುಚ್ಚಿದರೆ ಸುಟ್ಟರೆ, ಸ್ನಾಯುಗಳ ರಕ್ತಪೂರೈಕೆಗೆ ಅಡ್ಡಿಪಡಿಸಿದರೆ, ವೃಷಣಗಳನ್ನು ಬಲವಾಗಿ ಅವುಕಿದರೆ, ಹಿಸ್ಟಮಿನ್ನನ್ನು ಚುಚ್ಚುಮದ್ದಾಗಿ ಕೊಟ್ಟರೆ ಯಾವ ಸಂದರ್ಭದಲ್ಲೂ ನೋವು ಉಂಟಾಯಿತೆಂಬುದಕ್ಕೆ ಸೂಚನೆ ಕಾಣಲಿಲ್ಲ. ವೃಷಣಗಳನ್ನು ಅಮುಕಿದಾಗ ಹೊಟ್ಟೆತೊಳಸು ವಾಕರಿಕೆಗಳುಂಟಾದುವೇ ಹೊರತು ಮಿಕ್ಕ ಸಂದರ್ಭಗಳಲ್ಲಿ ಬೆವರುವುದಾಗಲಿ, ರಕ್ತದ ಒತ್ತಡದ ಬದಲಾವಣೆ ಆಗಲಿ, ಗುಂಡಿಗೆಯ ಮಿಡಿತ ಶ್ವಾಸಕ್ರಮದ ಬದಲಾವಣೆಯಾಗಲಿ ಕಂಡುಬರಲಿಲ್ಲ. ಈತನಲ್ಲಿ ಸ್ಪರ್ಶ ಶೀತೋಷ್ಣಗಳ ಸಂವೇದನೆ ಸಹಜವಾಗಿಯೇ ಇದ್ದಿತು. ಬಹುಶಃ ನೋವಿನ ನರಾಗ್ರಗಳು ಮಿದುಳಿನಲ್ಲಿ ಸಂಪರ್ಕಗೊಳ್ಳದೆ ಸಂವೇದನೆಯ ಅರಿವು ನಾಶವಾಗಿರುತ್ತದೆ ಎಂದು ತೋರುವುದು.

4 ಸ್ತನಿಗಳ ದೇಹೋಷ್ಣತೆಯ ನಿಯಂತ್ರಣದಲ್ಲಿ ಚರ್ಮದ ಪಾತ್ರ : ಸ್ತನಿಗಳ ದೇಹೋಷ್ಣತೆ ಹೊರಾವರಣದ ಶೀತೋಷ್ಣಗಳಿಂದ ವ್ಯತ್ಯಾಸಗೊಳ್ಳದೆ ಒಂದೇ ಮಟ್ಟದಲ್ಲಿರುವುದು ಅವುಗಳ ಒಂದು ಪ್ರಮುಖ ಲಕ್ಷಣ. ಇದು ಸತತ ದೇಹಕಾರ್ಯಗಳಿಂದಾಗುವ ಉಷ್ಣೋತ್ಪತ್ತಿ ಮತ್ತು ಸಾಧಾರಣವಾಗಿ ದೇಹಕ್ಕಿಂತ ತಂಪಾಗಿರುವ ಬಾಹ್ಯಾವರಣದ ಸಂಪರ್ಕದಿಂದ ಸ್ವಾಭಾವಿಕ ಭೌತ ಕಾರಣಗಳಿಗೆ ಅನುಸಾರವಾಗಿ ಆಗುವ ಉಷ್ಣ ನಷ್ಟ ಇವುಗಳ ಸಮತೋಲದಿಂದ ಲಭಿಸುವ ಸ್ಥಿತಿ. ಬಾಹ್ಯಾವರಣ ದೇಹಕ್ಕಿಂತ ತಂಪಾಗಿಲ್ಲದಿದ್ದಾಗ ಉಷ್ಣನಷ್ಟ ಕಡಿಮೆ ಆಗಿ ಈ ಸಮತೋಲ ಸಾಧ್ಯವಿಲ್ಲದೆ ದೇಹೋಷ್ಣತೆ ಹೆಚ್ಚುವಂಥ ಪ್ರಮೇಯವೂ ಬಾಹ್ಯಾವರಣ ಅತಿ ಶೀತವಾಗಿದ್ದರೆ ದೇಹೋಷ್ಣತೆ ಕಡಿಮೆಯಾಗುವಂಥ ಪ್ರಮೇಯವೂ ಉಂಟಾಗುತ್ತದೆ. ಇದನ್ನು ನಿವಾರಿಸಲು ಚರ್ಮ ಎರಡು ಬಗೆಯ ಪ್ರತಿಕ್ರಿಯೆಗಳನ್ನು ತೋರಿಸುತ್ತದೆ. ಮೊದಲನೆಯದು ಚರ್ಮದ ರಕ್ತವಾಹಿನಿಯಲ್ಲಿ ಆಗುವ ವ್ಯತ್ಯಾಸ. ಎರಡನೆಯದು ಸ್ವೇದಗ್ರಂಥಿ ರೋಮಗಳು ವಹಿಸುವ ಪಾತ್ರ. ಪ್ರಧಾನವಾಗಿ ಈ ಪ್ರತಿಕ್ರಿಯೆಗಳು ಚರ್ಮದಿಂದಲೇ ಒದಗುವ ದೇಹೋಷ್ಣತೆಯ ಅಲ್ಪತೆ ಆಧಿಕ್ಯಗಳ ಜ್ಞಾನದಿಂದ ನರಗಳ ಮೂಲಕ ಉಂಟಾಗುತ್ತವೆ. ಹೊರಗಡೆ ಚಳಿ ಹೆಚ್ಚಾಗಿ ದೇಹದಿಂದ ಹೆಚ್ಚು ಉಷ್ಣ ನಷ್ಟವಾಗುವಂತಿದ್ದರೆ ಚರ್ಮದಲ್ಲಿ ಚಳಿಯಿಂದ ಉಂಟಾಗುವ ನರಪ್ರಚೋದನೆಯಿಂದ ಚರ್ಮದ ಧಮನಿಗಳು ಕುಗ್ಗುತ್ತವೆ. ಅಲ್ಲದೆ ನೇರ ಸಂಪರ್ಕ ನಾಳಗಳ ಮೂಲಕ ರಕ್ತ ಅಭಿಧಮನಿಗಳಿಂದ ಅಪಧಮನಿಗಳಿಗೆ ಹರಿಯುತ್ತದೆ. ಇದರಿಂದ ಚರ್ಮದಲ್ಲಿ ರಕ್ತ ಪರಿಚಲನೆ ಕಡಿಮೆಯಾಗಿ ರಕ್ತ ಶೀತಕ್ಕೆ ಒಡ್ಡಲ್ಪಡುವುದರಿಂದ ಆಗುವ ಉಷ್ಣನಷ್ಟವೂ ಕಡಿಮೆ ಆಗುತ್ತದೆ. ಅಲ್ಲದೆ ಅದೇ ನರಪ್ರಚೋದನೆಯಿಂದ ಚಳಿಯಾದಾಗ ರೋಮಾಂಚನವಾಗುವುದರಿಂದ ನಿಮಿರಿದ ಕೂದಲುಗಳ ನಡುವೆ ಹೆಚ್ಚು ವಾಯು ಬಂಧಿಸಲ್ಪಟ್ಟು. ಅದೇ ಹೊದಿಕೆಯಾಗಿ ವರ್ತಿಸಿ ದೇಹದಿಂದ ಅವರಣಕ್ಕೆ ಆಗಬಹುದಾದ ಉಷ್ಣ ವರ್ಗಾವಣೆಯನ್ನು ತಡೆಯುತ್ತದೆ. ಚಳಿಯಿಂದ ಅಡ್ರಿನಲ್ ಗ್ರಂಥಿಯೂ ನರಗಳ ಮೂಲಕ ಪ್ರಚೋದನೆಗೊಂಡು ಅಡ್ರಿಲಿನ್ನನ್ನು ಬಿಡುಗಡೆ ಮಾಡುತ್ತದೆ. ಇದೂ ಚರ್ಮದಲ್ಲಿ ಮೇಲೆ ಹೇಳಿದ ಎರಡು ರೀತಿಯಲ್ಲೂ ಪ್ರವರ್ತಿಸಿ ಉಷ್ಣನಷ್ಟವನ್ನು ಮಿತಗೊಳಿಸುತ್ತದೆ.

ಬಾಹ್ಯಾವರಣದ ಉಷ್ಣಮಟ್ಟ ದೇಹೋಷ್ಣತೆಗೆ ಸಮೀಪವಾಗಿದ್ದರೆ ಇಲ್ಲವೆ ಹೆಚ್ಚಾಗಿದ್ದರೆ ದೇಹದಿಂದ ಉಷ್ಣನಷ್ಟವಾಗಲಾರದೆ ದೇಹೋಷ್ಣತೆ ಹೆಚ್ಚುತ್ತದೆ. ಚರ್ಮದ ನರತಂತುಗಳಿಂದ ಇದರ ಅರಿವುಂಟಾಗಿ ಅದರಿಂದ ಸೂಕ್ತ ನರಪ್ರಚೋದನೆ ಏರ್ಪಟ್ಟು ಸ್ವೇದಗ್ರಂಥಿಗಳು ಬೆವರನ್ನು ಸ್ರವಿಸಲು ಪ್ರಾರಂಭಿಸುತ್ತವೆ. ಬೆವರು ಹೊರಬಂದು ಆವಿಯಾಗಿ ಹೋಗುತ್ತದೆ. ಹೀಗೆ ಆವಿಯಾಗುವಾಗ ಇದಕ್ಕೆ ಬೇಕಾದ ಉಷ್ಣ ದೇಹದಿಂದಲೇ ಒದಗುವುದರಿಂದ ದೇಹೋಷ್ಣತೆ ಕಡಿಮೆಯಾಗುತ್ತದೆ. ದೇಹೋಷ್ಣತೆಯ ಸಹಜ ನಿಯಂತ್ರಣದ ಅವಶ್ಯಕತೆ ಮಾನವರಲ್ಲಿ ಸಾಮಾನ್ಯವಾಗಿ ಕಾಣಬರುವುದು ಇಂಥ ಸಂದರ್ಭಗಳಲ್ಲೇ. ಏಕೆಂದರೆ ಚಳಿಯ ವಿರುದ್ಧ ದೇಹದ ಉಷ್ಣನಷ್ಟವನ್ನು ಕಡಿಮೆ ಮಾಡಿಕೊಳ್ಳಲು ಮಾನವ ಬಟ್ಟೆ ಬರೆ ಮುಂತಾದ ಸುಲಭ ಮತ್ತು ಕೃತಕ ಸಾಧನಗಳನ್ನು ಮಾಡಿಕೊಂಡಿದ್ದಾನೆ. ಆದರೆ ಸೆಖೆಯ ವಿರುದ್ಧ ಇಂಥ ಸುಲಭೋಪಾಯಗಳಿಲ್ಲ. ಬೀಸಣಿಗೆ ಹಾಕಿಕೊಂಡರೂ ಅದೂ ಸಹಜ ಜೈವಿಕ ಕ್ರಮವಾಗಿ ಉತ್ಪತ್ತಿಯಾದ ಬೆವರನ್ನು ಕೃತಕವಾಗಿ ಶೀಘ್ರವಾಗಿ ಆವಿಯಾಗುವಂತೆ ಮಾಡುವುದು ಮಾತ್ರವೇ ಆಗಿದೆ. ಆವಿಯಾಗಿ ಶರೀರವನ್ನು ತಂಪಾಗಿ ಮಾಡಲು ಸ್ವೇದಗ್ರಂಥಿಗಳು ಎಷ್ಟು ಮಟ್ಟಿಗೂ ಚಟುವಟಿಕೆಯನ್ನು ತೋರಿಸಲು ಸಮರ್ಥವಾಗಿರುತ್ತವೆ. ಅಗತ್ಯ ಬಿದ್ದಾಗ ಗಂಟೆಗೆ ಒಂದು ಲೀಟರಿಗೆ ಮೇಲ್ಪಟ್ಟು ಬೆವರು ಸ್ರಾವವಾಗಿ ಆವಿಯಾಗಿ ಹೋಗುವುದು ತಿಳಿದಿದೆ. ಇಷ್ಟು ಅಧಿಕವಾಗಿ ಬೆವರನ್ನು ಸ್ರವಿಸಲು ಅನುಕೂಲವಾಗುವಂತೆ ಸ್ವೇದಗ್ರಂಥಿಗಳಿಗೆ ತಕ್ಕಷ್ಟು ಅಧಿಕವಾಗಿಯೇ ರಕ್ತಪೂರೈಕೆ ಖಾತರಿಯಾಗಿರುವಂತೆ ಏರ್ಪಟ್ಟಿದೆ. ಸ್ವೇದಗ್ರಂಥಿಗಳ ಚಟುವಟಿಕೆಯ ಪರಿಣಾಮವಾಗಿ ಸ್ಥಳೀಯವಾಗಿ ಬ್ರಾಡಿಕೈನಿನ್ ಎಂಬ ವಸ್ತು ಉತ್ಪತ್ತಿಯಾಗುವುದು. ಅದು ಸ್ಥಳೀಯ ಕಿರುಧಮನಿಗಳನ್ನು ಹಿಗ್ಗಿಸುವುದರಿಂದ ಹೆಚ್ಚು ರಕ್ತ ಹರಿಯಲು ಅವಕಾಶವಾಗುತ್ತದೆ.

5. ಚರ್ಮದ ಇತರ ಕ್ರಿಯೆಗಳು :  ಚರ್ಮದ ಹೊರತ್ವಚ ವಿಷವಸ್ತುಗಳಿಂದ ದೇಹವನ್ನು ರಕ್ಷಿಸುತ್ತದೆ. ಚರ್ಮ ಅಖಂಡವಾಗಿದ್ದಲ್ಲಿ ವಿಷವಸ್ತುಗಳ ಮೇಲೆ ನಾವು ನಿರ್ಯೋಚನೆಯಿಂದ ಕೈ ಆಡಿಸಬಹುದು. ಅದೇ ವಿಷ ಚರ್ಮದಲ್ಲಿ ಅತ್ಯಲ್ಪ ಗಾಯವಿದ್ದರೂ ಅಪಾಯಕರವಾಗಿ ಪರಿಣಮಿಸಬಹುದು. ಚರ್ಮ ಬೆವರನ್ನು ಸ್ರವಿಸುವುದು ದೇಹೋಷ್ಣತೆಯ ನಿಯಂತ್ರಣಕ್ಕಾಗಿಯಾದರೂ ಅದು ವಿಸರ್ಜನೆ ಮಾರ್ಗವೂ ಹೌದು. ಯೂರಿಯ ಲ್ಯಾಕ್ಟಿಕ್ ಆಮ್ಲ ಮತ್ತು ಇತರ ವಿಸರ್ಜನ ವಸ್ತುಗಳೂ ಇಂಗಾಲದ ಡೈಆಕ್ಸೈಡೂ ಈ ಮಾರ್ಗವಾಗಿ ಸ್ವಲ್ಪ ಮಟ್ಟಿಗೆ ವಿಸರ್ಜಿತವಾಗುತ್ತವೆ. ಮಾನವನಲ್ಲಿ ಇಂಗಾಲದ ಡೈಆಕ್ಸೈಡಿನ ವಿಸರ್ಜನೆ ಚರ್ಮದ ಮೂಲಕ ಆಗುವುದು ಅಗಣನೀಯವಾಗಿದ್ದರೂ ಕಪ್ಪೆಯಲ್ಲಿ ಅದು ಅಧಿಕವಾಗಿಯೇ ಇದೆ. ಕಪ್ಪೆಯ ಫುಪ್ಪುಸಗಳನ್ನು ತೆಗೆದು ಹಾಕಿದರೂ ಚರ್ಮದ ಮೂಲಕ ಆಕ್ಸಿಜನ್ನಿನ ಪೂರೈಕೆಯೂ ಇಂಗಾಲದ ಡೈಆಕ್ಸೈಡಿನ ವಿಸರ್ಜನೆಯೂ ಸಾಕಾದಷ್ಟು ಆಗಿ ಕಪ್ಪೆ ಜೀವಂತವಾಗಿರಲು ಸಾಧ್ಯವಾಗಿದೆ. ಮಾನವರಲ್ಲಿಯೂ ಚರ್ಮದ ವಿಸರ್ಜನ ಸಾಮಥ್ರ್ಯ ರೋಗಸ್ಥಿತಿಗಳಲ್ಲಿ ಗಣನೀಯವಾಗಿರುವುದು. ಕಾಮಾಲೆಯಲ್ಲಿ (ಜಾಂಡೀಸ್) ಪಿತ್ಥರಸ ವರ್ಣಗಳು (ಬೈಲ್ ಪಿಗ್‍ಮೆಂಟ್ಸ್) ಚÀರ್ಮದಿಂದ ವಿಸರ್ಜಿಸಲ್ಪಟ್ಟು ತೊಟ್ಟ ಬಟ್ಟೆ ಹಳದಿಯಾಗುವುದು ಕಂಡುಬಂದಿದೆ. ಮಧುಮೂತ್ರರೋಗಿಗಳ ಬೆವರಿನಲ್ಲಿ ಗ್ಲೂಕೋಸ್ ಇರುವುದೂ ತಿಳಿದಿದೆ. ಯುರೀಮಿಯ ರೋಗಸ್ಥಿತಿಯಲ್ಲಿ ಚರ್ಮದಿಂದ ಅಧಿಕವಾಗಿ ಯೂರಿಯ ವಿಸರ್ಜಿತವಾಗಿ ರೋಗಿಯ ವಿಶಿಷ್ಟ ಗಂಧಕ್ಕೆ ಕಾರಣವಾಗಿದೆ. ಚರ್ಮದಲ್ಲಿ ಕೂದಲು ನಿಮಿರುವುದು ಉಷ್ಣತಾನಿಯಂತ್ರಣಕ್ಕಾಗಿ ಮಾತ್ರವಲ್ಲ. ಕೆಲವು ಪ್ರಾಣಿಗಳಲ್ಲಿ ಇದು ರಕ್ಷಣ ಮಾರ್ಗವಾಗಿ ಕೂಡ ಇರುತ್ತದೆ. ಕೂದಲು ನಿಮಿರಿದ್ದಾಗ ಈ ಪ್ರಾಣಿಗಳು ಸ್ವಾಭಾವಿಕ ಆಕಾರಕ್ಕಿಂತ ದೊಡ್ಡವಾಗಿ ಕಂಡುಬರುವುದರಿಂದ ಶತ್ರುಗಳು ಹಿಮ್ಮೆಟ್ಟಬಹುದು. ಅಲ್ಲದೆ ಕೋಪಗೊಂಡಾಗಲೂ ರೋಮಾಂಚನವಾಗುವುದರಿಂದ ಪ್ರಾಣಿ ತನ್ನ ಕೋಪವನ್ನು ವ್ಯಕ್ತಪಡಿಸುವ ಸಾಧನವಾಗಿದೆ.

ಚರ್ಮದ ವರ್ಣವಿನ್ಯಾಸ ಅನೇಕ ವೇಳೆ ಪರಿಸರಕ್ಕೆ ಹೊಂದಿಕೊಳ್ಳುವಂತೆ ಇರುತ್ತದೆ. ಇದರಿಂದ ಪ್ರಾಣಿಗಳು ಶತ್ರುಗಳಿಂದ ಮರೆಯಾಗಲೂ ಕಣ್ಣು ತಪ್ಪಿಸಿ ಬೇಟೆಯನ್ನು ಹಿಡಿಯಲೂ ಅನುಕೂಲವಾಗುತ್ತದೆ. ಸಿಂಹದ ಮೈಬಣ್ಣ, ಹುಲಿಯ ಪಟ್ಟೆಗಳು, ಶೀತವಲಯದ ಕರಡಿಯ ಮೈಬಿಳುಪು ಗೋಸುಂಬೆಯ ಬಣ್ಣ ಬದಲಾಯಿಸುವ ಸಾಮಥ್ರ್ಯ ಇವೆಲ್ಲ ಇದಕ್ಕೆ ನಿದರ್ಶನಗಳು. ಅನೇಕ ವಿಷಪೂರಿತ ಹಾವುಗಳು ಎಚ್ಚರಿಕೆ ಕೊಡುವುದಕ್ಕಾಗಿಯೇ ಎನ್ನಿಸುವಂತೆ ಚರ್ಮದಲ್ಲಿ ಗಾಢವರ್ಣ ವಿನ್ಯಾಸ ಉಳ್ಳವಾಗಿರುತ್ತವೆ. ಕೆಲವು ನಿರುಪದ್ರವಿ ಹಾವುಗಳು ಇವುಗಳಂತೆಯೇ ವರ್ಣವಿನ್ಯಾಸ ಹೊಂದಿ ಶತ್ರುಗಳನ್ನು ವಂಚಿಸಿ ಪಾರಾಗುತ್ತವೆ. ಕೆಲವು ಪಕ್ಷಿಗಳಲ್ಲಿ ವರ್ಣವಿನ್ಯಾಸ ಸಂತಾನಾಭಿವೃದ್ಧಿಯ ಕಾಲದಲ್ಲಿ ಸಂಗಾತಿಯನ್ನು ಕೆರಳಿಸಬಲ್ಲ ವಿಶೇಷ ಮಾರ್ಪಾಡಾಗಿರುತ್ತದೆ.
ಹೊರಕಿವಿನಾಳದ ಚರ್ಮದಲ್ಲಿ ಗುಗ್ಗೆ ಗ್ರಂಥಿಗಳು ಇವೆ. ಇವು ಗುಗ್ಗೆ ಕ್ರಿಮಿನಾಶಕ ಮತ್ತು ಅಣುನಾಶಕ. ಕ್ರಿಮಿಕೀಟಗಳು ಕಿವಿಯ ಒಳಗೆ ಹಾನಿ ಮಾಡುವುದರ ವಿರುದ್ಧ ಗುಗ್ಗೆ ರಕ್ಷಣೆ ಒದಗಿಸುತ್ತದೆ. ಕೆಲವು ಪ್ರಾಣಿಗಳ ಚರ್ಮದಲ್ಲಿ ಕೆಂಪು ಗ್ರಂಥಿಗಳಿವೆ. ಇವಿರುವುದು ಸಾಮಾನ್ಯವಾಗಿ ಹೊರ ಪ್ರಜನನಾಳ ಮತ್ತು ಗುದದ್ವಾರಗಳಲ್ಲಿ. ಇವುಗಳ ಸ್ರಾವಕ್ಕೆ ವಿಶಿಷ್ಟ ಕಂಪು ಉಂಟು. ಲೈಂಗಿಕ ಪ್ರಾಮುಖ್ಯ ಇದ್ದು ಗಂಡುಹೆಣ್ಣುಗಳು ಲೈಂಗಿಕ ಕ್ರಿಯೆಗಾಗಿ ಸಂಗಾತಿಗಳನ್ನು ಅರಸಲೂ ತಾವು ಲೈಂಗಿಕ ಕ್ರಿಯೆಗೆ ಸಿದ್ಧವೆಂದು ತಿಳಿಸಲು ಸಹಾಯಕವಾಗಿವೆ. ಪುನುಗಿನ ಬೆಕ್ಕಿನಲ್ಲಿ ಒಸರುವ ಪುನುಗಿಗೂ ಕಸ್ತೂರಿಮೃಗದ ಕಸ್ತೂರಿಗೂ ಬಹುಶಃ ಇಂಥ ಪ್ರಾಮುಖ್ಯವೇ ಇರುವುದಾದರೂ ಮಾನವ ಅವುಗಳಿಂದ ಬೇರೆ ಪ್ರಯೋಜನ ಹೊಂದಿದ್ದಾನೆ.

ಅಖಂಡ ಚರ್ಮದ ಮೂಲಕ ವಸ್ತುಗಳನ್ನು ರಕ್ತಗತ ಮಾಡಿಸುವುದು ಸಾಧ್ಯವಲ್ಲದಿದ್ದರೂ ಅಸಾಧ್ಯವೇನಲ್ಲ. ನೀರು ಮತ್ತು ಅಗ್ರ್ಯಾನಿಕ್ ಎರಡರಲ್ಲೂ ವಿಲೀನವಾಗುವ ವಸ್ತುಗಳನ್ನು ಚರ್ಮದ ಮೇಲೆ ಹಚ್ಚುವುದರಿಂದ ಮತ್ತು ಉಜ್ಜುವುದರಿಂದ ಅವನ್ನು ರಕ್ತಗತವಾಗಿಸಬಹುದು. ಯಾವುದಾದರೂ ಒಂದರಲ್ಲೇ ವಿಲೀನವಾಗುವ ವಸ್ತುಗಳು ಇದಕ್ಕಿಂತ ಕಡಿಮೆ ಪ್ರಮಾಣದಲ್ಲಿ ರಕ್ತಗತವಾಗಬಲ್ಲವು. ಯಾವುದರಲ್ಲೂ ವಿಲೀನವಾಗದ ವಸ್ತುಗಳು ಅಖಂಡ ಚರ್ಮದೊಳಹೋಗಲಾರವು. ಸ್ಯಾಲ್‍ವರ್‍ಸಾನನ್ನು ಕಂಡು ಹಿಡಿಯುವುದಕ್ಕೆ ಮುಂಚೆ ಫರಂಗಿ ರೋಗಕ್ಕೆ (ಸಿಫಿಲಿಸ್) ಪಾದರಸ ಸಂಯುಕ್ತಗಳನ್ನು ಈ ರೀತಿ ದೇಹದೊಳಹೊಗಿಸಿ ಚಿಕಿತ್ಸೆ ಮಾಡಲಾಗುತ್ತಿತ್ತು. ಕಾಡ್‍ಮೀನಿನ ಎಣ್ಣೆಯನ್ನು ಕುಡಿಯಲು ಅಸಹ್ಯಪಟ್ಟು ಮೈಗೆ ಹಚ್ಚಿಕೊಂಡು ನೀವಿಕೊಳ್ಳುತ್ತ ಎಣ್ಣೆಯಲ್ಲಿರುವ ಜೀವಸತ್ತ್ವಗಳ ಅನುಕೂಲತೆಯನ್ನು ಸ್ವಲ್ಪ ಮಟ್ಟಿಗಾದರೂ ಪಡೆಯುತ್ತಿದ್ದುದೂ ಉಂಟು. ಟೆಸ್ಟೋಸ್ಟೀರೋನ್ ಎಂಬ ಪುರುಷರ ಲೈಂಗಿಕ ಹಾರ್ಮೋನನ್ನು ಮುಲಾಮಿನ ರೂಪದಲ್ಲಿ ಚರ್ಮದ ಮೇಲೆ ಪ್ರಯೋಗಿಸುವುದು ರೂಢಿಯಲ್ಲಿದೆ.

ಚರ್ಮದ ಬಂಧನಾಂಗಾಂಶ (ಕನೆಕ್ಟಿವ್ ಟಿಶ್ಯೂ) ದ್ರವ, ಮೇದಸ್ಸುಗಳ ಜಮಾವಣೆಗೆ ಬಹು ಯೋಗ್ಯಸ್ಥಳ. ನೀರು, ಲವಣ ಮತ್ತು ಆಹಾರಗಳನ್ನು ಬಾಯಿಂದ ಸೇವಿಸಲಾಗದಾಗ ಚರ್ಮದೊಳಗೆ ಚುಚ್ಚುಮದ್ದಾಗಿ ಪ್ರಯೋಗಿಸಿ ರಕ್ತಗತವಾಗುವಂತೆ ಮಾಡಲಾಗುತ್ತದೆ. ಪ್ರತಿಯೊಂದು ಸ್ಥಳದಲ್ಲೂ ಸುಮಾರು 50ಮಿ.ಲೀ. ಗಳಷ್ಟು ದ್ರವವನ್ನು ಮೂರು ನಾಲ್ಕು ಕಡೆ ಪ್ರಯೋಗಿಸಬಹುದು. ಇಷ್ಟು  ಅಧಿಕ ಪ್ರಮಾಣದಲ್ಲಿ ದ್ರವ ಸ್ಥಳೀಯವಾಗಿ ದಪ್ಪವಾದ ಉಬ್ಬನ್ನು ಉಂಟು ಮಾಡಿ ಸುಮಾರು ಅರ್ಧ ಗಂಟೆಯೊಳಗೆ ಅದು ರಕ್ತಗತವಾಗಿ ಉಬ್ಬು ಇಳಿದು ಹೋಗುತ್ತದೆ. ತೊಟ್ಟು ತೊಟ್ಟಾಗಿ ದ್ರವವನ್ನು ಚರ್ಮದ ಊತಕಕ್ಕೆ ಸೂಜಿ ಮದ್ದಾಗಿ ಸೇರಿಸಿ ಆ ಕ್ಷಣದಲ್ಲೆ ಅದು ರಕ್ತಗತವಾಗುವಂತೆ ಮಾಡಲು ದ್ರವಕ್ಕೆ ಸ್ವಲ್ಪ ಹಯಲ್ಯೂರೋನಿಡೇಸ್ ಎಂಬ ಎಂಜೈಮನ್ನು ಸೇರಿಸಲಾಗುವುದು. ಹುದುಗಿಸಿದ ದ್ರವ ಇದರ ನೆರವಿನಿಂದ ಊತಕದಲ್ಲಿ ವ್ಯಾಪಕವಾಗಿ ಹರಡಿ ಶೀಘ್ರವಾಗಿ ರಕ್ತಗತವಾಗುತ್ತದೆ. ಯಥೇಚ್ಚವಾಗಿ ಆಹಾರ ದೊರಕಿದಾಗ ಹೆಚ್ಚಿಗೆ ಆಹಾರ ಮೇದಸ್ಸಾಗಿ ಮಾರ್ಪಟ್ಟು ಚರ್ಮದಲ್ಲಿ ಸಂಗ್ರಹವಾಗುವುದು. ಅತ್ಯಧಿಕವಾಗಿ ಜಮಾವಣೆ ಆದಲ್ಲಿ ಬೊಜ್ಜು ಉಂಟಾಗುತ್ತದೆ. ಜಮಾಯಿಸಿದ ಮೇದಸ್ಸಿಗೆ, ಆಹಾರ ಲಭಿಸದ ಕಾಲದಲ್ಲಿ, ಉಪಯೋಗ ಉಂಟು. ನೈಸರ್ಗಿಕವಾಗಿ ಚರ್ಮದ ಅಡಿ ಅಧಿಕ ಮೇದಸ್ಸು ಜಮಾವಣೆ ಆಗಿ ನಿರಾಹಾರ ಸಮಯದಲ್ಲಿ ಅದು ಉಪಯೋಗವಾಗುವಂತಿರುವುದು ಹೈಮಂತ ನಿದ್ರೆ (ಹೈಬರ್‍ನೇಶನ್) ಮಾಡುವ ಪ್ರಾಣಿಗಳಲ್ಲಿ ಕಂಡುಬರುತ್ತದೆ. ಸ್ಕಂಧಾಸ್ಥಿತಿಗಳ (ಸ್ಕ್ಯಾಪುಲ) ಮಧ್ಯ ಬೆನ್ನುಚರ್ಮದಲ್ಲಿ ಶೈಶವದಲ್ಲಿ ಒಂದು ವಿಶಿಷ್ಟ ಮಾಸಲು ಬಣ್ಣದ ಮೇದಸ್ಸು (ಬ್ರೌನ್ ಫ್ಯಾಟ್) ಇರುತ್ತದೆ. ಇದು ಶಿಶುಗಳ ದೇಹೋಷ್ಣತೆಯ ನಿಯಂತ್ರಣದಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತವೆಂದು ತಿಳಿದುಬಂದಿದೆ.
6. ಚರ್ಮದ ರಸಾಯನ ವೃತ್ತಾಂತ: ರಾಸಾಯನಿಕ ದೃಷ್ಟಿಯಿಂದ ಚರ್ಮದಲ್ಲಿ ಮುಖ್ಯವಾಗಿ ಡರ್ಮಾಟಿನ್ ಸಲ್ಫೇಟ್ ಎಂಬ ಬಹುಶರ್ಕರವೂ ಕೊಲ್ಲಾಜೆನ್ ಎಂಬ ವಿಶಿಷ್ಟ ರೀತಿಯ ಪ್ರೋಟೀನೂ ಸ್ನಿಗ್ಧ ಪದಾರ್ಥಗಳೂ ಇವೆ. ಅಲ್ಲದೆ ಇನ್ನೂ ಇತರ ಪ್ರೋಟೀನುಗಳೂ ಇವೆ. ಡರ್ಮಾಟಿನ್ ಸಲ್ಫೇಟ್ ಅಥವಾ ಕಾಂಡ್ರಾಯಿಟಿನ್ ಸಲ್ಫೇಟ್ ಃ  ಎಂಬ ಬಹು ಶರ್ಕರದಲ್ಲಿ ಓ-ಅಸಿಟೈಟ್ ಆ-ಕಾಂಡ್ರಾಸಮೀನ್ (2-ಅಸಿಟಮಿಡೋ-2 ಡೀ ಆಕ್ಸಿ ಗ್ಯಲಾಕ್ಟೋಸ), ಹೆಕ್ಸ್ ಯೂರೋನಿಕ್ ಆಮ್ಲ ಮತ್ತು ಸಲ್ಫ್ಯೂರಿಕ್ ಆಮ್ಲಗಳು ಸಮಪರಿಮಾಣಗಳಲ್ಲಿರುತ್ತವೆ. ಹೆಕ್ಸ್ ಯೂರೋನಿಕ್ ಆಮ್ಲದ ಪ್ರಕೃತಿ ಇಡ್‍ಯೂರೋನಿಕ್ ಆಮ್ಲ ಎಂದು ಗುರುತಿಸಲಾಗಿದೆ. ಸಲ್ಫ್ಯೂರಿಕ್ ಆಮ್ಲದ ಅಂಶ ಇಡ್‍ಯೂರೋನಿಕ್ ಆಮ್ಲದ ನಾಲ್ಕನೆಯ ಇಂಗಾಲದ ಪರಮಾಣುವಿಗೆ ಕೂಡಿಕೊಂಡಿರುತ್ತದೆ.

ಚಿತ್ರ-3

 ಕಾಂಡ್ರಾಸಮೀನ್ ಮತ್ತು ಇಡ್‍ಯೂರೋನಿಕ್ ಆಮ್ಲಗಳ ಅಂಶಗಳು ಪರ್ಯಾಯವಾಗಿ ಜೋಡಿಸಲ್ಪಟ್ಟು ಯೂರೋನಿಕ್ ಆಮ್ಲದ ನಾಲ್ಕನೆಯ ಇಂಗಾಲ, ಕಾಂಡ್ರಾಸಮೀನಿನ ಮೂರನೆಯ ಇಂಗಾಲಕ್ಕೆ ಗ್ಲೈಕಾಸಿಡಿಕ್ ಬಂಧಗಳ ಮೂಲಕ ಕೂಡಿಕೊಂಡಿರುತ್ತದೆ ಕಾಂಡ್ರಾಯಿಟಿನ್ ಸಲ್ಫೇಟಿನ ವಿಶಿಷ್ಟಗುಣವೆಂದರೆ ತನ್ನ ಕುಟುಂಬಕ್ಕೆ ಸೇರಿದ ಬಹುಶರ್ಕರಗಳಂತಲ್ಲದೆ ಇದು ಯಾವುದೇ ಮೂಲದಿಂದ ಪಡೆದ ಹಯಾಲ್ ಯೂರೋನಿಡೇಸ್ ಎಂeóÉೈಮಿನಿಂದ ಜೀರ್ಣವಾಗುವುದಿಲ್ಲ. ಚರ್ಮದಲ್ಲಿನ ಅತಿಮುಖ್ಯ ಪ್ರೋಟೀನ್ ಆದ ಕೊಲ್ಲಾಜೆನ್ ಪಶುವರ್ಗದ ಎಲ್ಲ ಜೀವಿಗಳಲ್ಲಿಯೂ (ಮಾನವನೂ ಸೇರಿದಂತೆ) ಪ್ರಮುಖವಾದ ರಚನಾತ್ಮಕ (ಸ್ಟ್ರಕ್ಚರಲ್) ಪ್ರೋಟೀನ್. ಪ್ರಪಂಚದಲ್ಲಿ ಒಟ್ಟು ಸುಮಾರು 1012 ಕಿಲೋಗ್ರಾಮುಗಳಷ್ಟು ಕೊಲ್ಲಾಜೆನ್ ಇರಬಹುದೆಂದು ಅಂದಾಜು ಮಾಡಲಾಗಿದೆ.

 	ಚರ್ಮ, ಮೃದ್ವಸ್ಥಿ ಮತ್ತು ಇತರ ಕಡೆಗಳಿಂದ ಬೇರ್ಪಡಿಸಲ್ಪಟ್ಟ ಕೊಲ್ಲಾಜೆನ್ ತಂತುಗಳು ಬೆಳ್ಳಗಿವೆ. ಇವು ಪಾರಕಗಳಲ್ಲ. ವ್ಯಾನ್ ಗೀಸನ್ನಿನ ಆಮ್ಲೀಯ ಫುಕ್ಸಿನ್ನಿನಿಂದ ವಿಶಿಷ್ಟ ರೀತಿಯಲ್ಲಿ ಕೆಂಪು ಬಣ್ಣದಿಂದ ರಂಜಿತವಾಗುತ್ತವೆ. ಈ ಗುಣದಲ್ಲಿ ಹೇಗೋ ಹಾಗೆಯೇ ಎಳೆದರೆ ಉದ್ದವಾಗದ ಗುಣ, ಆಮ್ಲ ಮತ್ತು ಪ್ರತ್ಯಾಮ್ಲಗಳಲ್ಲಿ ಮುಳುಗಿಸಿದಾಗ ಉಬ್ಬುವ ಸ್ವಭಾವ ಮತ್ತು ಅಧಿಕ ಉಷ್ಣತೆಯಲ್ಲಿ ಉದ್ದ ಕುಗ್ಗುವ ಗುಣ ಇವೆಲ್ಲದರಲ್ಲಿ ಕೊಲ್ಲಾಜೆನ್ ಇಲಾಸ್ಟಿನ್ನಿನಿಂದ ಭಿನ್ನವಾಗಿದೆ. ಆದರೂ ಎಕ್ಸ್‍ಕಿರಣ ವಿವರ್ತನ ಮತ್ತು ಎಲೆಕ್ಟ್ರಾನ್ ಸೂಕ್ಷ್ಮದರ್ಶಕಗಳಿಂದ ಕೊಲ್ಲಾಜಿನ್ನನ್ನು ಗುರುತಿಸುವುದು ಉತ್ತಮ ವಿಧಾನ. ಎಲೆಕ್ಟ್ರಾನ್ ಸೂಕ್ಷ್ಮದರ್ಶಕದಿಂದ ಪರಿಶೀಲಿಸಿದಾಗ ಕೊಲ್ಲಾಜೆನ್ನಿನ ಸೂಕ್ಷ್ಮತಂತುಗಳ (ಫೈಬ್ರಿಲ್ಸ್) ನಿರ್ದಿಷ್ಟ ಸ್ಥಾನಗಳಲ್ಲಿ ಪಟ್ಟೆಗಳಿರುವಂತೆ ಕಂಡುಬರುವುದು. ನೀರು, ಪ್ರೋಟೀನುಗಳು, ಮ್ಯೂಕೋ ಬಹುಶರ್ಕರಗಳು ಮತ್ತು ಇತರ ಸಣ್ಣ ಅಣುಗಳ ಚೌಕಟ್ಟಿನೊಳಗೆ ಚರ್ಮದಲ್ಲಿರುವ ಕೊಲ್ಲಾಜೆನ್ ಸೇರಿಹೋಗಿರುತ್ತದೆ. ಚರ್ಮದಲ್ಲಿ ಈ ಬಗೆಯ ವ್ಯವಸ್ಥೆ ಇತರ ಊತಕಗಳಿಗಿಂತ ಹೆಚ್ಚು ಒತ್ತಾಗಿ ಉಂಟು. ಕೊಲ್ಲಾಜೆನ್ ತಂತುಗಳು ಈ ವ್ಯವಸ್ಥೆಯ ಪರ್ಯಂತ ಹಾಸುಹೊಕ್ಕಾಗಿ ಯದ್ವಾತದ್ವಾ ಹರಡಿಕೊಂಡಿರುತ್ತವೆ. 

ಜೈವಿಕ ವ್ಯವಸ್ಥೆಯಲ್ಲಿ ಕೊಲ್ಲಾಜೆನ್ ಲಂಬವಾದ ಮತ್ತು ಪ್ರತ್ಯೇಕಿತವಾಗಿರುವ ಸೂಕ್ಷ್ಮತಂತುಗಳ ಸಮುದಾಯ. ಇದರ ಅಡ್ಡಳತೆ ಆಕಾರವನ್ನು (ಸೋರ್ಸ್) ಅವಲಂಬಿಸಿದೆ. ತಂತುಗಳ ವ್ಯವಸ್ಥೆ, ಚರ್ಮದಲ್ಲಿ ಇರುವಂತೆ, ಗೊತ್ತುಗುರಿಯಿಲ್ಲದೆ ಹೆಣೆದುಕೊಂಡಿರಬಹುದು ಅಥವಾ ಸ್ನಾಯು ರಜ್ಜುವಿನಲ್ಲಿ ಇರುವಂತೆ ಸಮಾಂತರವಾಗಿರಬಹುದು. ಎಲೆಕ್ಟ್ರಾನ್ ಸೂಕ್ಷ್ಮದರ್ಶಕ ವಿಶ್ಲೇಷಣೆಯಿಂದ ಸೂಕ್ಷ್ಮತಂತುಗಳಲ್ಲಿ 700 Å ಅಂತರದಲ್ಲಿ ಪಟ್ಟೆಗಳು ಕಂಡುಬರುತ್ತವೆ. ಈ ಅಂತರ ಸೂಕ್ಷ್ಮತಂತುಗಳಲ್ಲಿ ಅಣುಮಾನಗಳ ವಿಶಿಷ್ಟ ಜೋಡಣೆಯಿಂದ ಉದ್ಭವವಾಗುತ್ತದೆ ಎಂದು ಪರಿಗಣಿಸಲಾಗಿದೆ. ಕೊಲ್ಲಾಜೆನ್ನನ್ನು ಆಮ್ಲೀಯ ಬಫರುಗಳಲ್ಲಿ ವಿಲೀನ ಮಾಡಿ ಪಡೆದ ವೈಯಕ್ತಿಕ ಅಣುಗಳನ್ನು ಪರಿಶೀಲಿಸಿ ಸಂಗ್ರಹಿಸಿದ ಸಂಗತಿಗಳಿಂದ ಕೊಲ್ಲಾಜೆನ್ ಅಣು ಸುಮಾರು 3000 Å  ಗಳಷ್ಟು ಉದ್ದವಾಗಿದೆ ಎಂದು ತಿಳಿದುಬಂದಿದೆ. ಅಣುವಿನ ಅಸಮಪಕ್ಷತೆ ಅಧಿಕ. ಈಐS ಎಂಬ ಕೊಲ್ಲಾಜೆನ್ನಿನ ಒಂದು ಮಾರ್ಪಾಡಿನಲ್ಲಿ ಸಹ ಅಣುವಿನ ಉದ್ದ ಸುಮಾರು 2800 Å .

ಕೊಲ್ಲಾಜೆನ್ನಿನ ರಚನೆ : ಕೊಲ್ಲಾಜೆನ್ನಿನ ರಚನೆಯ ನಾನಾ ವಿವರಗಳನ್ನು ಕೆಳಗೆ ತೋರಿಸಲಾಗಿದೆ. ಪ್ರಾಥಮಿಕ ರಚನೆಯಲ್ಲಿ ಗಮನಿಸಬೇಕಾದ ಅಂಶವೆಂದರೆ ಗ್ಲೈಸಿನ್, ಪ್ರೋಲಿನ್ ಮತ್ತು ಹೈಡ್ರಾಕ್ಸಿ ಪ್ರೋಲಿನ್ ಅಮೈನೋ ಆಮ್ಲಗಳ ಬಾಹುಳ್ಯ. ಗ್ಲೈಸಿನ್ನಿನ ಪರಿಮಾಣ ಒಟ್ಟು ಅಮೈನೋ ಆಮ್ಲಗಳ ಪರಿಮಾಣದ ಸುಮಾರು 1/3 ರಷ್ಟು, ಪ್ರೋಲಿನ್ ಮತ್ತು ಹೈಡ್ರಾಕ್ಸಿ ಪ್ರೋಲಿನುಗಳ ಪರಿಮಾಣ ಸುಮಾರು ¼ ರಷ್ಟು.

1 ಮಾದರಿ ಅನುಕ್ರಮ.

-ಗ್ಲೈಸಿನ್-ಘಿ-ಙ-ಗ್ಲೈಸಿನ್-ಪ್ರೋಲಿನ್-ಙ-ಗ್ಲೈಸಿನ್-ಘಿ-..ಹೈಡ್ರಾಕ್ಸಿ ಪ್ರೋಲಿನ್-ಗ್ಲೈಸಿನ್-ಪ್ರೋಲಿನ್-ಹೈಡ್ರಾಕ್ಸಿ ಪ್ರೋಲಿನ್.
2 ಕೊಲ್ಲಾಜೆನ್ನಿನಲ್ಲಿ ಮೂರು ಶ್ರೇಣಿಗಳಿವೆ. ಪ್ರತಿ ಒಂದು ಶ್ರೇಣಿಯೂ α-ಕುಂಡಲಿನಿ(α-ಹೆಲಿಕ್ಸ್) ಆಕಾರದಲ್ಲಿದೆ.

ಚಿತ್ರ-4

3 ಮೂರು ಶ್ರೇಣಿಗಳೂ ಪರಸ್ವರವಾಗಿ ಹೆಣೆದುಕೊಂಡು ಮುಪ್ಪುರಿಯಾದ ಒಂದು ಅತಿ α-ಕುಂಡಲಿನಿ(ಸೂಪರ್ α-ಹೆಲಿಕ್ಸ್) ರೂಪಿತವಾಗುತ್ತದೆ.

ಚಿತ್ರ-5

ಚಿತ್ರ-6

4 ಅಣು: ಈ ಅಣುವನ್ನು ನೀಳವಾದ ದಂಡದಂತೆ ತೋರಿಸಲಾಗಿದೆ. ದಂಡದ ಉದ್ದ 3000 Å . ಅಗಲ 11 Å . ಇದರಲ್ಲಿ ಮೂರು α-ಕುಂಡಲಿನಿಗಳಿದ್ದು ಅವು ದಂಡದ ಉದ್ದಕ್ಕೂ ವಿಸ್ತøತವಾಗಿವೆ. ಅಮೈನೋ ಆಮ್ಲಗಳ ಸಂಘಟನೆ ಮತ್ತು ಅನುಕ್ರಮದ ಪರಿಶೀಲನೆಯಿಂದ ಮೂರು ಶ್ರೇಣಿಗಳಲ್ಲಿ ಎರಡು ಬಗೆಯ ಶ್ರೇಣಿಗಳಿವೆ (α1 ಮತ್ತು α2) ಎಂದು ಗೊತ್ತಾಗಿದೆ. 

ಚಿತ್ರ-7

ಇದುವರೆಗೆ ಅಭ್ಯಸಿಸಿರುವ ಕೊಲ್ಲಾಜೆನ್ನುಗಳಲ್ಲಿ ಎರಡು α1 ಶ್ರೇಣಿಗಳು ಒಂದು α2 ಶ್ರೇಣಿಯೂ ಇವೆ ಎಂದು ಗೊತ್ತಾಗಿದೆ. ಅಣು ಬಹುಮಟ್ಟಿಗೆ α-ಕುಂಡಲಿನಿಯ ಆಕಾರದಲ್ಲಿದೆ. ಆದರೆ ಓ-ಅಂತ್ಯದಲ್ಲಿ ಮತ್ತು ಕಾರ್ಬಾಕ್ಸಿ ಅಂತ್ಯದಲ್ಲಿ (ಅ) ಈ ಕ್ರಮಬದ್ಧ ಆಕಾರವಿಲ್ಲದ ಪ್ರದೇಶಗಳಿರಬಹುದು. ಶ್ರೇಣಿಗಳ ನಡುವೆ ಏರ್ಪಡುವ ಹೈಡ್ರೋಜನ್ ಬಂಧಗಳು (ಬಾಂಡ್ಸ್) ಅಣುವಿಗೆ ಸ್ಥಿರತೆಯನ್ನು ನೀಡುತ್ತವೆ. ಪ್ರತಿ ತ್ರಿವಳಿಗೆ ಒಂದರಂತೆ ಹೈಡ್ರೊಜನ್ ಬಂಧಗಳಿರಬಹುದೆಂದು ಊಹಿಸಲಾಗಿದೆ. ಇದಲ್ಲದೆ ಓ-ಅಂತ್ಯದಲ್ಲಿ ಅಡ್ಡ ಕೊಂಡಿಗಳು (ಕ್ರಾಸ್ ಲಿಂಕೇಜಸ್) ರೂಪಿತವಾಗುತ್ತವೆ.

5 ಪ್ರಕೃತಿಯಲ್ಲಿ ಕೊಲ್ಲಾಜೆನ್ ಕ್ರಮಬದ್ಧ ರೀತಿಯಲ್ಲಿ ವ್ಯವಸ್ಥಿತವಾಗಿರುವ ಅಣುಗಳಿಂದ ರೂಪಿತವಾದ ತಂತುಗಳಂತೆ ಇದೆ. ಅಣುಗಳು ಸಾಪೇಕ್ಷವಾಗಿ ವ್ಯವಸ್ಥಿತವಾಗಿರುವ ರೀತಿಯನ್ನು ತೋರಿಸಿದೆ. ಅಣುಗಳನ್ನು ಅಂಬಿನಂತೆ ತೋರಿಸಿ ಪರಸ್ವರ ಅತಿವ್ಯಾಪನೆಯಾಗುವ ಪ್ರದೇಶಗಳನ್ನು ಸೂಚಿಸಿದೆ. ಅಣುವನ್ನು ಏಕಮಾನಗಳನ್ನಾಗಿ ವಿಂಗಡಿಸಿ ಪ್ರತಿಯೊಂದು ಏಕಮಾನವನ್ನು ಆ ಎಂಬ ಪ್ರತೀಕದಿಂದ ಸೂಚಿಸುವ ಪದ್ದತಿ ಉಂಟು. ಒಂದೊಂದು ಅಣುವಿನಲ್ಲಿಯೂ 4.4 ಏಕಮಾನಗಳಿವೆ. ಇವು ಜೋಡಣೆಯಾಗಿರುವ ರೀತಿಯನ್ನು ವಿವರವಾಗಿ ಅರಿಯಲು ಸಾದ್ಯವಾಗಿಲ್ಲ. ಅಣುವಿನಲ್ಲಿ ಅತಿವ್ಯಾಪನೆ ಪ್ರದೇಶಗಳೂ ರಂಧ್ರ ಪ್ರದೇಶಗಳೂ ಇವೆ. ಇವನ್ನು ಎಲೆಕ್ಟ್ರಾನ್ ಸೂಕ್ಷ್ಮದರ್ಶಕದಲ್ಲಿ ಮಾತ್ರ ಕಾಣುವುದು ಸಾಧ್ಯ.

ಚಿತ್ರ-8

ಕೊಲ್ಲಾಜೆನ್ನಿನ ಅಮೈನೋ ಆಮ್ಲಗಳ ಅನುಕ್ರಮ ಈವರೆಗೆ ಅಭ್ಯಸಿಸಲಾಗಿರುವ ಆರು ಪ್ರಾಣಿಗಳಲ್ಲಿ ಬಹುಮಟ್ಟಿಗೆ ಸಾದೃಶ್ಯವನ್ನು ತೋರಿಸುತ್ತದೆ. ಗಮನಿಸಬೇಕಾದ ಮುಖ್ಯ ಅಂಶಗಳಿವು :

1 ಓ-ಅಂತ್ಯದಿಂದ 9ನೆಯ ಸ್ಥಾನದಲ್ಲಿ ಲೈಸಿನ್ ಅಮೈನೋ ಆಮ್ಲದ ಅಂಶ ಉಂಟು. ಇದು ಭಾಗಶಃ ಹೈಡ್ರಾಕ್ಸಿಲೀಕರಣಕ್ಕೆ ಒಳಗಾಗುತ್ತದೆ. ಲೈಸಿನ್ ರೂಪದಲ್ಲೇ ಆಗಲಿ ಹೈಡ್ರಾಕ್ಸಿಲೈಸಿನ್ನಿನ ರೂಪದಲ್ಲೇ ಆಗಲಿ ಇದು ಕೊಲ್ಲಾಜೆನ್ನಿನಲ್ಲಿ ಇರುವ ಅಡ್ಡ ಕೊಂಡಿಗಳಿಗೆ ಕಾರಣವಾಗುತ್ತದೆ.

2 ಇಲಿಯ ಚರ್ಮದ ಕೊಲ್ಲಾಜೆನ್ನಿನ ಓ-ಅಂತ್ಯದ ಮೊದಲನೆಯ 15 ಅಮೈನೋ ಆಮ್ಲಗಳನ್ನು ಬಿಟ್ಟರೆ ಉಳಿದ ಅಮೈನೋ ಆಮ್ಲಗಳ ಪೈಕಿ ಪ್ರತಿ ಮೂರನೆಯ ಅಂಶ ಗ್ಲೈಸಿನ್ನಿನದು. ಈ ಸಂಗತಿಯಿಂದಲೇ ಕೊಲ್ಲಾಜೆನ್ನಿಗೆ ಮುಪ್ಪುರಿ ಕುಂಡಲಿನಿಯ ರೂಪ ದೊರೆಯುತ್ತದೆ.

3 ತ್ರಿವಳಿಯಲ್ಲಿ ಗ್ಲೈಸಿನ್ನನ್ನು ಸೇರಿಸಿ ಎಣಿಸಿದರೆ ಗ್ಲೈಸಿನ್ ಅಮೈನೋ ಅಂಶದಿಂದ ಮೂರನೆಯ ಸ್ಥಾನದಲ್ಲಿ ಹೈಡ್ರಾಕ್ಸಿಪ್ರೋಲಿನ್ ಇದೆ. ಇದು ಪ್ರೋಲಿನ್ನಿನ ವ್ಯುತ್ಪನ್ನವಾದ್ದರಿಂದ ಪ್ರಾರಂಭದಲ್ಲಿ ಪ್ರೋಲಿನ್ ಇದ್ದಲ್ಲೆಲ್ಲ ಕೆಲವು ಕಡೆ ಹೈಡ್ರಾಕ್ಸಿಲೀಕರಣದ ಪರಿಣಾಮವಾಗಿ ಹೈಡ್ರಾಕ್ಸಿಪ್ರೋಲಿನ್ ಒದಗಿ ಬಂತು ಎಂದು ತೋರುತ್ತದೆ. ಎಲ್ಲ ಪ್ರೋಲಿನ್ನುಗಳೂ ಈ ರೀತಿ ಪರಿವರ್ತಿತವಾಗಬೇಕಾದ ಪ್ರಮೇಯವಿಲ್ಲ. ಪರಿವರ್ತನೆ 0% ಯಿಂದ 20%, 30%, 50%, 100%ಗಳಷ್ಟಿರಬಹುದು.
ಕೊಲ್ಲಾಜೆನ್ನಿನ ಅಡ್ಡಕೊಂಡಿಗಳು ಏರ್ಪಡುವ ಪೂರ್ವಭಾವಿಯಾಗಿ ಲೈಸೈಲ್ ಅಥವಾ ಹೈಡ್ರಾಕ್ಸಿ ಲೈಸೈಲ್ ಅಂಶಗಳು ಆಲ್ಡಿಹೈಡಾಗಿ ಪರಿವರ್ತಿತವಾಗುತ್ತವೆ.

 	ಪೆಪ್ಟೈಡ್ ಶ್ರೇಣಿ-ಅಊ2-ಅಊ2. ಅಊ2. ಓಊ2 ಪೆಪ್ಟೈಡ್ ಶ್ರೇಣಿ-ಅಊ2. ಅಊ2. ಅಊ2. ಅಊಔ ಅಡ್ಡಕೊಂಡಿಗಳು ಎರಡು ಅಣುಗಳ ನಡುವೆ (ಎಂದರೆ ಅಣ್ವಂತರವಾಗಿ) ಹಾಗೂ ಒಂದೇ ಅಣುವಿನ ಎರಡು ಕುಂಡಲಿನಿಗಳ ನಡುವೆ (ಎಂದರೆ ಅಂತರಾಣುವಾಗಿ) ಏರ್ಪಡಬಹುದು. ಈಗ ತಿಳಿದಿರುವ ಮಟ್ಟಿಗೆ ಹೇಳುವುದಾದರೆ ಓ-ಅಂತ್ಯದಲ್ಲಿರುವ ಮತ್ತು ಕಾರ್ಬಾಕ್ಸಿ ಅಂತ್ಯದಲ್ಲಿರುವ ಲೈಸಿನ್ ಅಂಶಗಳು ಅಡ್ಡಕೊಂಡಿಯಲ್ಲಿ ಭಾಗವಹಿಸುತ್ತವೆ. ಎರಡು ಕುಂಡಲಿನಿಗಳ ನಡುವೆ ಏರ್ಪಡುವ ಅಡ್ಡಕೊಂಡಿಗಳು ಎರಡು ಲೈಸಿನ್ ಅಂಶಗಳ ಆಲ್ಡಿಹೈಡ್ (-ಅಊಔ) ಪುಂಜಗಳ ನಡುವೆ ಅಲ್ಡಾಲ್ ಸಂಘನನದಿಂದ ಏರ್ಪಡುತ್ತವೆ.

ಪೆಪ್ಟೈಡ್-ಅಊ2-ಅಊ2-ಅಊ2-ಅಊ-ಅಊ.ಅಊ2.ಅಊ2. ಪೆಪ್ಟೈಡ್ 
			   ಔಊ   ಅಊಔ

ಚಿತ್ರ-9

	ಕೊಲ್ಲಾಜೆನ್ ಅಣುಗಳ ನಡುವೆ ಏರ್ಪಡುವ ಅಡ್ಡಕೊಂಡಿಗಳಲ್ಲಿ ಡೀ ಹೈಡ್ರೋಲೈಸಿನ್ ಮತ್ತು ನಾರ್‍ಲ್ಯೂಸಿನುಗಳು ಭಾಗವಹಿಸಬಹುದು. ಎಲಾಸ್ಟಿನ್ನಿನಲ್ಲಿ ಈ ಬಗೆಯ ಬಂಧಗಳಿವೆ. ಕೊಲ್ಲಾಜೆನ್ನಿನಲ್ಲಿ ಹೈಡ್ರಾಕ್ಸಿಲೈಸಿನ್ ಆಲ್ಡಿಹೈಡ್ ಅಥವಾ ಓಊ2 ಪುಂಜದೊಂದಿಗೆ (ಅಮೈನೋ ಪುಂಜ) ಅಡ್ಡಕೊಂಡಿಗಳನ್ನು ರಚಿಸಬಹುದು.
ಪೆಪ್ಟೈಡ್. ಅಊ2.ಅಊ2.ಅಊ.ಅಊ2.ಓ=ಅಊ.ಅಊ2.ಅಊ2.ಅಊ2.ಅಊ2.ಔಊ
		        ಔಊ
ಪೆಪ್ಟೈಡ್ ಕೊಲ್ಲಾಜೆನ್ ತಂತುವಿನಲ್ಲಿ ಅಂತರಾಣು ಹಾಗೂ ಅಣ್ವಂತರವಾಗಿ ಏರ್ಪಡಬಹುದಾದ ಅಡ್ಡಕೊಂಡಿಗಳನ್ನು ಕಾಣಬಹುದು. ಅಂತರಣ್ವಕ ಬಂಧಗಳು ಓ-ಅಂತ್ಯದಲ್ಲಿ ಮತ್ತು ಅಣ್ವಂತರವಾಗಿ ಏರ್ಪಡುವ ಬಂಧಗಳು ಒಂದು ಅಣುವಿನ ಓ-ಅಂತ್ಯ ಮತ್ತು ನೆರೆಹೊರೆಯ ಅಣುವಿನ α-ಕುಂಡಲಿನಿ ಪ್ರದೇಶದ ಒಂದು ಭಾಗದ ನಡುವೆ ಏರ್ಪಡಬಹುದು.

ಚಿತ್ರ-10

ಕೊಲ್ಲಾಜೆನ್ನಿನ ಶರ್ಕರಾಂಶವಾದ ಕೋಸಿಲ್ ಗ್ಯಲಾಕ್ಟೋಸ್ α1 ಶ್ರೇಣಿಯ ಹೈಡ್ರಾಕ್ಸಿಲೈಸಿನ್ ಅಂಶಕ್ಕೆ ಬದ್ಧವಾಗಿದೆ. α2 ಶ್ರೇಣಿಯಲ್ಲಿಯೂ ಶರ್ಕರಾಂಶವಿದೆ. ಆದರೆ ಇದು ಪೆಪ್ಟೈಡ್ ಶ್ರೇಣಿಗೆ ಬದ್ಧವಾಗಿರುವ ಸ್ಥಾನವಿನ್ನೂ ಗೊತ್ತಾಗಿಲ್ಲ.
ಕೊಲ್ಲಾಜೆನ್ನಿನ ಜೀವರಾಸಾಯನಿಕ ವೃತ್ತಾಂತ. ಸಂಶ್ಲೇಷಣೆ; ಕೊಲ್ಲಾಜೆನ್ನು ಕೋಶಗಳಲ್ಲಿ ಸಂಶ್ಲೇಷಣೆಯಾಗಿ ಅದರ ಕಾರ್ಯಸ್ಥಾನಗಳಾದ ಚರ್ಮ, ಮೃದ್ವಸ್ಥಿ ಇತ್ಯಾದಿ ಊತಕಗಳಿಗೆ ರವಾನೆಯಾಗುತ್ತದೆ. ಇದರ ಸಂಶ್ಲೇಷಣೆಯ ಕ್ರಿಯಾವಿಧಾನ ಇತರ ಪ್ರೋಟೀನುಗಳ ಸಂಶ್ಲೇಷಣೆಯದರಂತೆಯೇ. ರೈಬೊಸೋಮುಗಳ ಮೇಲೆ ಅಮೈನೋ ಆಮ್ಲಗಳು ಕ್ರಮಬದ್ಧವಾಗಿ ಜೋಡಣೆಯಾದ ತರುವಾಯ ಪ್ರೋಲಿನ್ ಮತ್ತು ಲೈಸಿನ್ನುಗಳ ಹೈಡ್ರಾಕ್ಸಲೀಕರಣವಾಗುತ್ತದೆ. ಇದಾದ ಬಳಿಕ ಕುಂಡಲಿನಿಯ ರೂಪ ಒದಗುವುದು. ಶರ್ಕರಾಂಶಗಳ ಸೇರ್ಪಡೆ ಮುಂದಿನ ಕ್ರಿಯೆ. ಅನಂತರ ಕೋಶದಿಂದ ಕೊಲ್ಲಾಜೆನ್ ಸ್ರವನವಾಗಿ, ಬೆಳೆಯುತ್ತಿರುವ ತಂತುವಿಗೆ ರವಾನೆಯಾಗುತ್ತದೆ. ದೇಹದ ಪರಿಸರದಲ್ಲಿರುವ ಸ್ಥಿತಿಯಲ್ಲಿ ಕೊಲ್ಲಾಜೆನ್ ವಿಲೀನವಾಗುವುದಿಲ್ಲ. ಎಂದರೆ ಸಾಗಾಣಿಕೆ ಯಾವುದೋ ಒಂದು ವಿಶಿಷ್ಟ ರೀತಿಯಿಂದಾಗಬೇಕು. ಕೊಲ್ಲಾಜೆನ್ ಬಹುಶಃ ಅದರ ಪೂರ್ವಜ (ಪ್ರೀಕರ್ಸರ್) ಪ್ರೋಕೊಲ್ಲಾಜೆನ್ ರೂಪದಲ್ಲಿ ರವಾನೆಯಾಗುತ್ತದೆ ಎಂದು ಭಾವಿಸಲಾಗಿದೆ. ಅನಂತರ ಲೈಸಿನ್ನಿನ ಆಲ್ಡಹೈಡ್ ಪುಂಜಗಳು ರೂಪಿತವಾಗಿ ಕೊಲ್ಲಾಜೆನ್ ತನ್ನ ಕ್ರಿಯಾಶೀಲ ರೂಪವನ್ನು ತಳೆಯುವುದು.

ಜೈವಿಕ ಚಟುವಟಿಕೆ : ಚರ್ಮದಲ್ಲಿ ಇತರ ಕೋಶಗಳಲ್ಲಿರುವಂತೆಯೇ ನಾನಾ ಬಗೆಯ ಜೀವರಾಸಾಯನಿಕ ಕ್ರಿಯೆಗಳು ಜರಗುತ್ತವೆ. ಚರ್ಮದಲ್ಲಿ ಪ್ರತಿ 100ಗ್ರಾಮಿಗೆ (ಒದ್ದೆ ತೂಕ) 47ರಿಂದ 82ಮಿ.ಗ್ರಾಮ್ ಗ್ಲೂಕೋಸ್ ಶೇಖರಿತವಾಗಿರುತ್ತದೆ. ಚರ್ಮದಲ್ಲಿರುವ ಗ್ಲೂಕೋಸಿನ ಪರಿಮಾಣಕ್ಕೂ ರಕ್ತದಲ್ಲಿನ ಅದರ ಮಟ್ಟಕ್ಕೂ ನೇರವಾಗಿ ಸಂಬಂಧ ಉಂಟು. ಗ್ಲೂಕೋಸಿನ ಸೇವನೆಯಿಂದ ಚರ್ಮ ಮತ್ತು ರಕ್ತದಲ್ಲಿ ಗ್ಲೂಕೋಸಿನ ಮಟ್ಟ ಏರುವುದು. ಆದರೆ ರಕ್ತದಲ್ಲಿ ಈ ಮಟ್ಟ ಶೀಘ್ರವಾಗಿ ಇಳಿಯಲು ಪ್ರಾರಂಭಿಸುತ್ತದೆ; ಚರ್ಮದಲ್ಲಿ ಇಳಿಕೆ ನಿಧಾನ. ಆದ್ದರಿಂದ ಚರ್ಮ ದೇಹದ ಗ್ಲೂಕೋಸಿನ ಮಟ್ಟವನ್ನು ನಿಯಂತ್ರಿಸುವ ಸಾಧನವಾಗಿರಬಹುದು.
ಚರ್ಮದಲ್ಲಿ ಗ್ಲೂಕೋಸ್ ನಾನಾ ವಸ್ತುಗಳಿಗೆ-ಉದಾಹರಣೆಗೆ ಲ್ಯಾಕ್ಟಿಕ್ ಆಮ್ಲ, ಇಂಗಾಲದ ಡೈಆಕ್ಸೈಡ್, ತೈಲಾಮ್ಲಗಳು ಮತ್ತು ಸ್ಟೆರಾಲುಗಳಾಗಿ-ಪರಿವರ್ತಿತವಾಗುತ್ತದೆ. ಗ್ಲೂಕೋಸನ್ನು ಗ್ಲೈಕೋಜಿನ್ ರೂಪದಲ್ಲಿ ಶೇಖರಿಸಿಡಲು ಸಹಾಯ ಮಾಡುವ ಎಂಜೈóಮ್ ಸಮೂಹಗಳೂ ಚರ್ಮದಲ್ಲಿವೆ.

ಸಾಧಾರಣವಾಗಿ ಮಾನವನ ಚರ್ಮ ತೈಲಗಳ ತೆಳುವಾದ ಒಂದು ಪೊರೆಯಿಂದ ಆವೃತವಾಗಿರುತ್ತದೆ. ಬೆವರು ಅಥವಾ ನೀರು ಇವನ್ನು ಚರ್ಮದ ಮೇಲೆ ಹರಡುತ್ತವೆ. ಈ ಪದಾರ್ಥಗಳ ಉತ್ಪತ್ತಿ ಆಗುವುದು ಸೆಬೇಷಿಯನ್ ಗ್ರಂಥಿಗಳಿಂದ. ಚರ್ಮವನ್ನು ಮೃದುವಾಗಿಡುವುದು ಇವುಗಳ ಕೆಲಸ. ಅಲ್ಲದೆ ಈ ತೈಲಗಳಲ್ಲಿರುವ ತೈಲಾಮ್ಲಗಳಿಗೆ ಬ್ಯಾಕ್ಟೀರಿಯ ಮತ್ತು ಶಿಲೀಂಧ್ರಗಳನ್ನು ವಿರೋಧಿಸುವ ಗುಣ ಉಂಟು ಎಂದು ಊಹಿಸಲಾಗಿದೆ. ಉದಾಹರಣೆಗೆ ಕಾಲ್ಬೆರಳಿನ ಸಂದಿಯಲ್ಲಿ ತೋರಿಬರುವ ಸೋಂಕಿಗೆ ಕಾರಣಗಳಾದ ಟ್ರೈಕೋಫೈಟಾನ್ ಮೆಂಟಗ್ರೋಫೈಟಸ್ ಮತ್ತು ಟಿ.ರುಬ್ರಮ್ ಎಂಬ ಶಿಲೀಂಧ್ರಗಳ ಬೆಳೆವಣಿಗೆಯನ್ನು ಸೀಬಮ್ಮಿನಲ್ಲಿರುವ ಬಿಡಿ ತೈಲಾಮ್ಲಗಳು ತಡೆಗಟ್ಟುತ್ತವೆ. ಆದರೆ ಚರ್ಮದಲ್ಲಿರುವ ಅಥವಾ ಸೀಬಮ್ಮಿನ ತೈಲಾಮ್ಲಗಳಿಗೆ ಎಲ್ಲ ಬ್ಯಾಕ್ಟೀರಿಯಗಳನ್ನೂ ಎಲ್ಲ ಶಿಲೀಂಧ್ರಗಳನ್ನೂ ನಿರೋಧಿಸಬಲ್ಲ ಸಾಮಥ್ರ್ಯ ಉಂಟು ಎಂಬುದಕ್ಕೆ ಪ್ರಾಯೋಗಿಕ ಪುರಾವೆಗಳು ದೊರೆತಿಲ್ಲ.

 	ಚರ್ಮದ ಮೇಲ್ಮೈಯಲ್ಲಿರುವ ತೈಲಗಳು (ಲಿಪಿಡ್ಸ್) ಮುಖ್ಯವಾಗಿ ಟ್ರೈಗ್ಲಿಸರೈಡುಗಳನ್ನು(20%-44%), ಬಿಡಿ ತೈಲಾಮ್ಲಗಳನ್ನು (2%-30%), ಮೇಣ ಮತ್ತು ಸ್ಟೆರಾಲ್ ಎಸ್ಟರುಗಳನ್ನು (23%-25%)  ಮತ್ತು ಸ್ಕ್ವಾಲೀನನ್ನು (8%-12%) ಒಳಗೊಂಡಿರುತ್ತವೆ. ಡೈಗ್ಲಿಸರೈಡುಗಳು (5%-14%), ಮಾನೋಗ್ಲಿಸರೈಡುಗಳು (2%) ಮತ್ತು ಬಹುಶಃ ಫಾಸ್ಫೋತೈಲಗಳು (2%-8%) ಅಲ್ಪ ಪರಿಮಾಣಗಳಲ್ಲಿರುತ್ತವೆ. ಇವು ನಾಲ್ಕು ಮೂಲಗಳಿಂದ ದೊರೆಯುತ್ತವೆ : 1. ಹಚ್ಚಿಕೊಳ್ಳುವ ಸುಗಂಧ ತೈಲಗಳು, 2. ಸೆಬಾಷಿಯನ್ ಗ್ರಂಥಿಗಳು, 3. ಹೊರತ್ವಚದ ಕೊಡುಗೆ, 4. ಕೆರಾಟಿನ್ನುಗಳು. ಈ ನಾಲ್ಕು ಮೂಲಗಳಿಂದ ದೊರೆಯುವ ತೈಲಗಳು ಪರಿಮಾಣದಲ್ಲಿ ಸಾಪೇಕ್ಷವಾಗಿ ಬದಲಾವಣೆಯಾಗುತ್ತವೆಯಾಗಿ ಆ ಪದಾರ್ಥಗಳ ಸಂಘಟನೆಯಲ್ಲಿ ವ್ಯತ್ಯಾಸ ಸಹಜವಾಗಿಯೇ ಉಂಟಾಗುತ್ತದೆ. ಚರ್ಮದ ತೈಲಾಮ್ಲಗಳಲ್ಲಿ ಅಪರ್ಯಾಪ್ತ ತೈಲಾಮ್ಲಗಳ ಪರಿಮಾಣವೇ ಹೆಚ್ಚು. ದೀರ್ಘ ಸರಣಿಯ ತೈಲಾಮ್ಲಗಳ ಬಾಹುಳ್ಯವೇ ಹೆಚ್ಚು. ಚರ್ಮದಲ್ಲಿರುವ ಸ್ಟೆರಾಲುಗಳು ಜೀವರಾಸಾಯನಿಕ ಕ್ರಿಯೆಗಳಿಗೆ ಒಳಗಾಗುತ್ತವೆ. ಜೀವಸತ್ತ್ವದ ಪೂರ್ವಜಾತ ವಸ್ತುಗಳು ಸೂರ್ಯನ ಬೆಳಕಿನ ಅತಿನೇರಿಳೆ ಕಿರಣಗಳಿಂದ ಪ್ರಭಾವಿತವಾಗಿ ಜೀವಸತ್ತ್ವವಾಗಿ ಪರಿವರ್ತಿತವಾಗುತ್ತವೆ.

 	ಚರ್ಮದಲ್ಲಿ ತೈಲಾಮ್ಲಗಳ ಸಂಶ್ಲೇಷಣೆಯೂ ಜರಗುವುದು. ಸಿಹಿಮೂತ್ರ ರೋಗಿಯ ಚರ್ಮದಲ್ಲಿ ಈ ಸಂಶ್ಲೇಷಣೆ ಎಂದಿನಂತೆ ಕುಂಠಿತವಾಗುತ್ತದೆ. ಇನ್ಸುಲಿನ್ನಿನಿಂದ ಚಿಕಿತ್ಸೆ ಮಾಡಿದಾಗ ಸಂಶ್ಲೇಷಣೆ ಎಂದಿನಂತೆ ನಡೆಯುವುದು. ಆಹಾರದ ಕೊರತೆಯಲ್ಲಿ ಸಹ ಸಂಶ್ಲೇಷಣೆ ಮಂದಗತಿಯಲ್ಲಿ ನಡೆಯುತ್ತದೆ. ಪ್ರಾಣಿಗಳ ಚರ್ಮದಲ್ಲಿ ಸ್ಟೆರಾಲುಗಳ ಸಂಶ್ಲೇಷಣೆ ನಡೆಯುವುದು ಎರಡು ಮಾರ್ಗಗಳಲ್ಲಿ. ಇವೆರಡಕ್ಕೆ ಲ್ಯಾನೋಸ್ಟೆರಾಲಿನಿಂದ ಕೊಲೆಸ್ಟೆರಾಲ್ ಉತ್ಪತ್ತಿಯಾಗುವ ಮಾರ್ಗದಲ್ಲಿ ಸಂಶ್ಲೇಷಿತವಾಗುವ ಮಧ್ಯವರ್ತಿ ಸಂಯುಕ್ತಗಳಲ್ಲಿ ಭಿನ್ನತೆ ಉಂಟು. ಬ್ಲಾಕ್ ಕಂಡುಹಿಡಿದ ಮಾರ್ಗದಲ್ಲಿ ಡೆಸ್ಮೋಸ್ಟೆರಾಲ್ ಸಂಯುಕ್ತ ಕೊಲೆಸ್ಟೆರಾಲಿಗೆ ಪರಿವರ್ತನೆಯಾಗುವಾಗ ಅಂತ್ಯಘಟ್ಟದಲ್ಲಿ ಪಾಶ್ರ್ವ ಸರಣಿಯ ದ್ವಿಬಂಧ ಅಪಕರ್ಷಿತವಾಗುತ್ತದೆ. ಈ ಕ್ರಿಯೆ ಸ್ಟೆರಾಲಿನ ನ್ಯೂಕ್ಲಿಯಸ್ ರೂಪಿತವಾದ ಅನಂತರವೇ ನಡೆಯುವುದು. ರಸ್ಸೆಲ್ ಕಂಡುಹಿಡಿದ ಮಾರ್ಗದಲ್ಲಿ ಸ್ಟೆರಾಲಿನ ನ್ಯೂಕ್ಲಿಯಸ್ ರೂಪಿತವಾಗುವ ಮೊದಲೇ ದ್ವಿಬಂಧ ಅಪಕರ್ಷಿತವಾಗಿರುತ್ತದೆ. ಈ ಮಾರ್ಗದಲ್ಲಿರುವ ಒಂದು ಮಧ್ಯವರ್ತಿ 7-ಡೀಹೈಡ್ರೋ ಕೊಲೆಸ್ಟೆರಾಲ್ ಸೂರ್ಯನ ಬೆಳಕಿನಿಂದ ಆ ಜೀವಸತ್ತ್ವವಾಗಿ ಪರಿವರ್ತಿತವಾಗುತ್ತದೆ ಎಂಬ ವಿಷಯ ಚರ್ಮದಲ್ಲಿ ಈ ಕ್ರಿಯಾಪಥದ ಮಹತ್ತ್ವವನ್ನು ಎತ್ತಿ ತೋರಿಸುತ್ತದೆ. ಚರ್ಮದಲ್ಲಿ ಲಿಂಗ ಹಾರ್ಮೋನುಗಳು ಕೊಲೆಸ್ಟೆರಾಲಿನ ಸಂಶ್ಲೇಷಣೆಯನ್ನು ಹತೋಟಿಯಲ್ಲಿಡುತ್ತವೆ. ಟೆಸ್ಟೋಸ್ಟೆರೋನ್ ಮತ್ತು ಪ್ರೋಜೆಸ್ಟೆರೋನುಗಳು ಕೊಲೆಸ್ಟೆರಾಲಿನ ಸಂಶ್ಲೇಷಣೆಯನ್ನು ಹೆಚ್ಚಿಸುತ್ತವೆ.
(ಎಚ್.ಎಸ್.ಎಸ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ